January19, 2026
Monday, January 19, 2026
spot_img

ಪಾಕ್ ಪೊಲೀಸ್ ತರಬೇತಿ ಅಖಾಡದಲ್ಲಿ ರಕ್ತಸಿಕ್ತ ಹೋರಾಟ; 6 ಉಗ್ರರ ಜೊತೆ 7 ಸಿಬ್ಬಂದಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ತಡರಾತ್ರಿ ಪೊಲೀಸ್ ತರಬೇತಿ ಕೇಂದ್ರವನ್ನು ಗುರಿಯಾಗಿಸಿ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ಏಳು ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಭದ್ರತಾ ಪಡೆಗಳು ನಡೆಸಿದ ಪ್ರತ್ಯುತ್ತರ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರು ಸಹ ಹತರಾಗಿದ್ದಾರೆ.

ಘಟನೆ ವಿವರ:

ಉಗ್ರರು ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ಅನ್ನು ಪೊಲೀಸ್ ತರಬೇತಿ ಕೇಂದ್ರದ ಮುಖ್ಯ ಗೇಟ್‌ಗೆ ಡಿಕ್ಕಿ ಹೊಡೆಸುವುದರ ಮೂಲಕ ದಾಳಿಯನ್ನು ಆರಂಭಿಸಿದರು. ತಕ್ಷಣವೇ ಟ್ರಕ್ ಭಾರಿ ಸ್ಫೋಟಗೊಂಡಿತು. ಈ ಆಕ್ರಮಣದ ನಂತರ ಉಗ್ರರು ಮತ್ತು ಭದ್ರತಾ ಸಿಬ್ಬಂದಿಯ ನಡುವೆ ಸುಮಾರು ಐದು ಗಂಟೆಗಳ ಕಾಲ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ಮಾರಕ ಘರ್ಷಣೆಯಲ್ಲಿ 7 ಪೊಲೀಸರು ತಮ್ಮ ಪ್ರಾಣ ಕಳೆದುಕೊಂಡರೆ, 13 ಮಂದಿ ಪೊಲೀಸರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದಾಳಿಯ ಸಮಯದಲ್ಲಿ ತರಬೇತಿ ಕೇಂದ್ರದಲ್ಲಿ ಸುಮಾರು 200 ತರಬೇತಿ ನಿರತ ಪೊಲೀಸರು, ಬೋಧಕರು ಮತ್ತು ಸಿಬ್ಬಂದಿ ಇದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಎಲ್ಲಾ ತರಬೇತಿ ನಿರತ ಅಭ್ಯರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು.

ಈ ಕಾರ್ಯಾಚರಣೆಯಲ್ಲಿ ಪಾಕ್ ಸೇನೆಯ ಸಿಬ್ಬಂದಿಯ ಸಹಕಾರವನ್ನು ಅಧಿಕಾರಿಗಳು ಶ್ಲಾಘಿಸಿದ್ದಾರೆ. ಭಯೋತ್ಪಾದಕರಿಂದ ಭದ್ರತಾ ಸಿಬ್ಬಂದಿ ಆತ್ಮಹತ್ಯಾ ಜಾಕೆಟ್‌ಗಳು, ಸ್ಫೋಟಕಗಳು, ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಇನ್ನೂ ಯಾರಾದರೂ ಉಗ್ರರು ಅಡಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಶೋಧ ಕಾರ್ಯಾಚರಣೆ ಮುಂದುವರಿದಿದೆ.

Must Read