ಹೊಸದಿಗಂತ ವರದಿ, ದಾವಣಗೆರೆ
ದಸರಾ ಹಬ್ಬದ ಸಂದರ್ಭದಲ್ಲಿ ಅರಳಿಮರ ವೃತ್ತದ ಬಳಿ ಅಳವಡಿಸಿದ್ದ ಶ್ರೀರಾಮನ ಭಾವಚಿತ್ರಕ್ಕೆ ಹಾಗೂ ಮುದ್ದಾಭೋವಿ ಕಾಲೋನಿಯ ೨ನೇ ಕ್ರಾಸ್ ನಲ್ಲಿ ಅಳವಡಿಸಿದ್ದ ಶ್ರೀ ಚಾಮುಂಡೇಶ್ವರಿ ಭಾವಚಿತ್ರ ಹರಿದು, ವಿರೂಪಗೊಳಿಸುವ ಮೂಲಕ ಮತೀಯ ದ್ವೇಷ ಮೂಡಿಸಿ, ಸಮಾಜದ ಶಾಂತಿ ಕದಡುವ ದುಷ್ಕೃತ್ಯ ಎಸಗಿದ್ದ ಐವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಮುಕ್ತಿಯಾರ್, ಅಬೀದ್, ಅತೀಕ್, ಸಾದಿಕ್ ಹಾಗೂ ಅಮಾನುಲ್ಲಾ ಬಂಧಿತ ಆರೋಪಿಗಳು.
ಅ.೩ರಂದು ಬೆಳಗಿನ ಜಾವ ಗಸ್ತಿನಲ್ಲಿದ್ದ ಪೊಲೀಸರು ಫ್ಲೆಕ್ಸ್ ಗಳಿಗೆ ಹಾನಿಯಾಗಿರುವುದನ್ನು ಗಮನಿಸಿದ್ದು, ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿತ್ತು.
ಇದೀಗ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ಪರಮೇಶ್ವರ ಹೆಗ್ಡೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಶರಣಬಸವೇಶ್ವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಲಕ್ಷ್ಮಣನಾಯ್ಕ ಹಾಗೂ ಸಿಬ್ಬಂದಿಗಳ ತಂಡವು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.