ಭಾರತೀಯ ಹವಾಮಾನ ಇಲಾಖೆ ರಾಜ್ಯದ 14 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ವರುಣನ ಆರ್ಭಟ ಮುಂದುವರಿಯಲಿದ್ದು, ರಾಜ್ಯಾದ್ಯಂತ ಕೆಲವೆಡೆ ಭೂಕುಸಿತದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ನಿನ್ನೆ ಸುರಿದ ಭಾರಿ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಅನೇಕ ಪ್ರದೇಶಗಳು ಜಲಾವೃತವಾಗಿದ್ದು, ಇಂದು ಕೂಡ ಮಳೆಯ ಅಬ್ಬರ ಜೋರಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 15ರವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ.
ಇಂದು ಹಳದಿ ಅಲರ್ಟ್ ಘೋಷಿಸಲಾಗಿರುವ 14 ಜಿಲ್ಲೆಗಳು ಹೀಗಿವೆ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ.
ಈ ಜಿಲ್ಲೆಗಳಲ್ಲಿ 10 ಮಿ.ಮೀ.ಯಿಂದ 30 ಮಿ.ಮೀ.ವರೆಗೂ ಮಳೆಯಾಗಬಹುದು ಎಂದು ಅಂದಾಜಿಸಲಾಗಿದ್ದು, ಭೂಕುಸಿತ ಉಂಟಾಗುವ ಸಾಧ್ಯತೆಗಳ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.
ಇದರ ಜೊತೆಗೆ, ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದೂ ಸಹ ಮಳೆಯ ಅಬ್ಬರ ಮುಂದುವರಿಯಲಿದೆ. ಹೀಗಾಗಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.