January19, 2026
Monday, January 19, 2026
spot_img

ಎರಡು ಮುಸ್ಲಿಂ ರಾಷ್ಟ್ರಗಳ ಘರ್ಷಣೆ; ‘TTP’ ನೆಪದಲ್ಲಿ ಪಾಕ್ ದಾಳಿಗೆ ತಾಲಿಬಾನ್ ಆಕ್ರಮಣಕಾರಿ ಪ್ರತಿಕ್ರಿಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದ್ದು, ಉಭಯ ದೇಶಗಳ ಮಧ್ಯೆ ಈಗ ಯುದ್ಧದ ಭೀತಿ ಆವರಿಸಿದೆ. ಇತ್ತೀಚೆಗೆ ಪಾಕಿಸ್ತಾನವು ಕಾಬೂಲ್ ಮೇಲೆ ವಾಯುದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ತಾಲಿಬಾನ್ ಪಡೆಗಳು ಪಾಕಿಸ್ತಾನದ ಮೇಲೆ ಭಾರೀ ಪ್ರತಿದಾಳಿ ನಡೆಸಿವೆ. ಪಾಕಿಸ್ತಾನವು ಕ್ಷಿಪಣಿ ದಾಳಿ ಮೂಲಕ ಇದಕ್ಕೆ ಪ್ರತ್ಯುತ್ತರ ನೀಡಿದೆ.

ಅಫ್ಘಾನ್-ಪಾಕ್ ಗಡಿಯಾದ ಡುರಾಂಡ್ ರೇಖೆಯ ಬಳಿ ನಡೆದ ಘರ್ಷಣೆಗಳಲ್ಲಿ ಕನಿಷ್ಠ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ, ತಾಲಿಬಾನ್ ಪಡೆಗಳು ಗಡಿಯಲ್ಲಿ ಪಾಕಿಸ್ತಾನ ಸೇನೆ ಸ್ಥಾಪಿಸಿದ್ದ ಸುಮಾರು 12 ಔಟ್‌ಪೋಸ್ಟಿಂಗ್‌ಗಳನ್ನು ವಶಪಡಿಸಿಕೊಂಡಿವೆ ಎಂದು ವರದಿಯಾಗಿದೆ.

ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳ ಗಡಿಯಲ್ಲಿರುವ ಡುರಾಂಡ್ ರೇಖೆಯುದ್ದಕ್ಕೂ ಪಾಕಿಸ್ತಾನಿ ಸೇನಾ ಹೊರಠಾಣೆಗಳನ್ನು ಅಫ್ಘಾನ್ ಪಡೆಗಳು ವಶಪಡಿಸಿಕೊಂಡಿವೆ ಎಂದು ಅಫ್ಘಾನ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.

ಘರ್ಷಣೆಗೆ ಕಾರಣ:

ಅಕ್ಟೋಬರ್ 9 ರಂದು, ಪಾಕಿಸ್ತಾನವು ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯಗಳಲ್ಲಿ ನೆಲೆಸಿದ್ದ ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ನ ಹಿರಿಯ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿಗಳನ್ನು ನಡೆಸಿತ್ತು. ಈ ದಾಳಿಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಅಫ್ಘಾನ್ ಪಡೆಗಳು, ಡುರಾಂಡ್ ರೇಖೆಯ ಸಮೀಪದ ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳ ಮೇಲೆ ಆಕ್ರಮಣಕಾರಿ ಪ್ರತಿದಾಳಿ ನಡೆಸಿವೆ.

ಎರಡೂ ಮುಸ್ಲಿಂ ರಾಷ್ಟ್ರಗಳ ನಡುವಿನ ಈ ತೀವ್ರ ಘರ್ಷಣೆಯ ಬೆನ್ನಲ್ಲೇ, ಪ್ರಮುಖ ಮುಸ್ಲಿಂ ದೇಶಗಳಾದ ಸೌದಿ ಅರೇಬಿಯಾ ಮತ್ತು ಕತಾರ್ ಮಧ್ಯಪ್ರವೇಶಿಸಿದ್ದು, ಪರಿಸ್ಥಿತಿ ತಿಳಿಗೊಳಿಸುವಂತೆ ಮತ್ತು ಘರ್ಷಣೆಯನ್ನು ನಿಲ್ಲಿಸುವಂತೆ ಉಭಯ ದೇಶಗಳ ನಾಯಕರ ಬಳಿ ಮನವಿ ಮಾಡಿವೆ. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಯುದ್ಧದ ವಾತಾವರಣ ನಿರ್ಮಾಣವಾಗಿದೆ.

Must Read