January21, 2026
Wednesday, January 21, 2026
spot_img

ಜಮ್ಮು-ಕಾಶ್ಮೀರವನ್ನು “ಭಾರತದ ಭಾಗ”ವೆಂದ ಅಫ್ಘಾನ್: ಪಾಕಿಸ್ತಾನಕ್ಕೆ ಉರಿ ತಡಿಯೋಕಾಗ್ತಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅಫ್ಘಾನಿಸ್ತಾನ ನೀಡಿದ ಜಂಟಿ ಹೇಳಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು “ಭಾರತದ ಅವಿಭಾಜ್ಯ ಅಂಗ”ವೆಂದು ಉಲ್ಲೇಖಿಸಿರುವುದು ಪಾಕಿಸ್ತಾನವನ್ನು ತೀವ್ರವಾಗಿ ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಅಫ್ಘಾನ್ ರಾಯಭಾರಿಯನ್ನು ಕರೆಸಿ ಅಧಿಕೃತ ಆಕ್ಷೇಪಣೆ ಸಲ್ಲಿಸಿದ್ದು, ಈ ಹೇಳಿಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದರು. ಈ ಸಭೆಯ ನಂತರ ಬಿಡುಗಡೆಗೊಂಡ ಜಂಟಿ ಹೇಳಿಕೆಯಲ್ಲಿ, ಏಪ್ರಿಲ್ 22, 2025 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಲಾಯಿತು. ಈ ಖಂಡನೆಯಲ್ಲೂ ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವೆಂದು ಉಲ್ಲೇಖಿಸಿರುವುದು ಪಾಕಿಸ್ತಾನಕ್ಕೆ ಅಸಮಾಧಾನ ಮೂಡಿಸಿದೆ.

ಪಾಕಿಸ್ತಾನದ ವಿದೇಶಾಂಗ ಕಚೇರಿಯ ಪ್ರಕಟಣೆಯ ಪ್ರಕಾರ, ಪಶ್ಚಿಮ ಏಷ್ಯಾ ಮತ್ತು ಅಫ್ಘಾನಿಸ್ತಾನ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಅಫ್ಘಾನ್ ರಾಯಭಾರಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. “ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಭಾಗವೆಂದು ಘೋಷಿಸುವುದು ಯುಎನ್ ನಿರ್ಣಯಗಳ ಸ್ಪಷ್ಟ ಉಲ್ಲಂಘನೆ” ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿದೆ.

ಇದಲ್ಲದೆ, ಅಫ್ಘಾನ್ ವಿದೇಶಾಂಗ ಸಚಿವ ಮುತ್ತಕಿ ನೀಡಿದ “ಭಯೋತ್ಪಾದನೆ ಪಾಕಿಸ್ತಾನದ ಆಂತರಿಕ ಸಮಸ್ಯೆ” ಎಂಬ ಹೇಳಿಕೆಗೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿದೆ. “ಟಿಟಿಪಿ ಸೇರಿದಂತೆ ಭಯೋತ್ಪಾದಕ ಸಂಘಟನೆಗಳು ಅಫ್ಘಾನ್ ನೆಲದಿಂದ ಪಾಕಿಸ್ತಾನದ ಮೇಲೆ ದಾಳಿ ನಡೆಸುತ್ತಿವೆ ಎಂಬುದಕ್ಕೆ ಸಾಕ್ಷಿ ನೀಡಿದ್ದೇವೆ. ಜವಾಬ್ದಾರಿಯನ್ನು ಇತರರ ಮೇಲೆ ಹಾಕುವುದರಿಂದ ಅಫ್ಘಾನ್ ಸರ್ಕಾರ ತನ್ನ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಪಾಕಿಸ್ತಾನ ಎಚ್ಚರಿಸಿದೆ.

Must Read