Monday, October 13, 2025

ಇಂದು ಬಿಜೆಪಿ ಕೋರ್ ಕಮಿಟಿ ಸಭೆ: ರಾಜ್ಯ ರಾಜಕೀಯದ ಪ್ರಮುಖ ವಿಚಾರಗಳ ಚರ್ಚೆ ನಿರೀಕ್ಷೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕೀಯದ ಪ್ರಮುಖ ಬೆಳವಣಿಗೆಗಳ ನಡುವೆಯೇ ಇಂದು ಸಂಜೆ ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಈ ಸಭೆಗೆ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ನೇತೃತ್ವ ವಹಿಸಲಿದ್ದು, ರಾಜ್ಯದ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ಸಭೆಯಲ್ಲಿ ಅತಿವೃಷ್ಟಿಯಿಂದಾಗಿರುವ ಬೆಳೆನಷ್ಟ, ಬೆಂಗಳೂರು ರಸ್ತೆಗುಂಡಿ ಸಮಸ್ಯೆ, ಸುರಂಗ ಮಾರ್ಗ ನಿರ್ಮಾಣ, ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಚುನಾವಣೆ ಸೇರಿದಂತೆ ಹಲವು ಪ್ರಸ್ತುತ ವಿಚಾರಗಳು ಚರ್ಚೆಗೆ ಬರಲಿವೆ. ಸಂಜೆ 5 ಗಂಟೆಗೆ ಆರಂಭವಾಗುವ ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಬಸವರಾಜ ಬೊಮ್ಮಾಯಿ, ಹಾಗೂ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಉಪಸ್ಥಿತರಿರಲಿದ್ದಾರೆ.

ಇತ್ತೀಚೆಗೆ ವಿಜಯೇಂದ್ರ ಮತ್ತು ಅಶೋಕ್ ಅವರ ನೇತೃತ್ವದಲ್ಲಿ ಎರಡು ತಂಡಗಳು ಉತ್ತರ ಕರ್ನಾಟಕದ ನೆರೆಬಾಧಿತ ಪ್ರದೇಶಗಳ ಪರಿಶೀಲನೆ ನಡೆಸಿದ್ದು, ಅಲ್ಲಿನ ಪರಿಸ್ಥಿತಿ, ಪರಿಹಾರ ವಿತರಣೆ ಮತ್ತು ಜಂಟಿ ಸಮೀಕ್ಷೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಇದೇ ವೇಳೆ, ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಲು ರಾಜಕೀಯ ಹೋರಾಟ ನಡೆಸುವ ಬಗ್ಗೆ ತಂತ್ರ ರೂಪಿಸುವ ಸಾಧ್ಯತೆಯಿದೆ. ಜೊತೆಗೆ, ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತೋರಿಸಿರುವ ನಿರ್ಲಕ್ಷ್ಯಕ್ಕೆ ವಿರುದ್ಧವಾಗಿ ಹೋರಾಟದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ಇದೆ.

error: Content is protected !!