Monday, October 13, 2025

ರಾಜೀನಾಮೆ ಕೊಡಿಸಲು ‘ರೇಪ್, ಪೋಕ್ಸೋ’ ಕೇಸ್ ಪಿತೂರಿ?: ಡಿಕೆಶಿ ವಿರುದ್ಧ ಮುನಿರತ್ನ ಕೆಂಡಾಮಂಡಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್‌ಆರ್ ನಗರ ಬಿಜೆಪಿ ಶಾಸಕ ಮುನಿರತ್ನ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಚನ್ನಪಟ್ಟಣ ಮತ್ತು ಕನಕಪುರದಿಂದ ರೌಡಿಗಳನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಇವತ್ತು ನಾನು ಬದುಕಿದ್ದೇನೆಂದರೆ ಪೊಲೀಸರೇ ಕಾರಣ” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮತ್ತಿಕೆರೆ ಜೆಪಿ ಪಾರ್ಕ್‌ನಲ್ಲಿ ನಡೆದ ಡಿಕೆಶಿ ಭಾಗವಹಿಸಿದ್ದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಿಂದ ಹೊರಬಂದು ಮಾತನಾಡಿದ ಮುನಿರತ್ನ, ಕಾರ್ಯಕ್ರಮಕ್ಕೆ ರೌಡಿಶೀಟರ್‌ಗಳನ್ನು ಕರೆಸಲಾಗಿದೆ. ಡಿಕೆಶಿ ಸಹೋದರ ಸೋತಾಗಿನಿಂದ ತಾನು ಟಾರ್ಗೆಟ್ ಆಗಿರುವೆ ಎಂದು ದೂರಿದರು.

“ನನಗೆ ಆಹ್ವಾನ ಬಂದಿಲ್ಲ ಎಂದು ಮೂರು ದಿನದ ಹಿಂದೆ ಸುದ್ದಿಗೋಷ್ಠಿ ಮಾಡಿದ್ದೆ. ಆನಂತರವಾದರೂ ಸಂಸದರಿಗೆ, ಶಾಸಕರಿಗೆ ಆಹ್ವಾನ ನೀಡಬೇಕಿತ್ತು. ಆಹ್ವಾನ ನೀಡದ್ದಕ್ಕೆ ನಾನು ಪ್ರಶ್ನೆ ಮಾಡಿದೆ. ಇದು ಸರ್ಕಾರಿ ಕಾರ್ಯಕ್ರಮವಾದ್ದರಿಂದ ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕ, ಸಂಸದರ ಫೋಟೋ ಹಾಕಬೇಕು. ಆದರೆ ಎಲ್ಲಿಯೂ ಫೋಟೋ ಹಾಕಿಲ್ಲ. ಇದು ಕಾಂಗ್ರೆಸ್ ಕಾರ್ಯಕ್ರಮವೇ ಅಥವಾ ಸರ್ಕಾರಿ ಕಾರ್ಯಕ್ರಮವೇ? ಇದನ್ನು ಪ್ರಶ್ನೆ ಮಾಡಿದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ” ಎಂದರು.

“ನನ್ನ ಮೇಲೆ ಮತ್ತಷ್ಟು ಕೇಸ್ ಹಾಕಲು ತಯಾರಿ ಮಾಡುತ್ತಿದ್ದಾರೆ. ರೇಪ್ ಕೇಸ್ ಆಯ್ತು, ದಲಿತ ನಿಂದನೆ ಆಯ್ತು, ಈಗ ಪೋಕ್ಸೋ ಕೇಸ್ ಹಾಕಲಿಕ್ಕೆ ರೆಡಿ ಮಾಡುತ್ತಿದ್ದಾರೆ. ನನ್ನಿಂದ ರಾಜೀನಾಮೆ ಕೊಡಿಸುವುದೇ ಅವರ ಉದ್ದೇಶ. ಬೆಳಗ್ಗೆಯಿಂದ ಅವರ ಪಕ್ಕ ಇರುವವರನ್ನು ಶಾಸಕರನ್ನಾಗಿ ಮಾಡಲು ಅವರು ಬಹಳ ಪ್ರಯತ್ನ ನಡೆಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ನಾನು ಸತ್ತರೂ ಇಲ್ಲೇ ಸಾಯುತ್ತೇನೆ. ರಾಜೀನಾಮೆ ನೀಡುವ ಮಾತೇ ಇಲ್ಲ” ಎಂದು ಸಿಟ್ಟು ಹೊರಹಾಕಿದರು.

error: Content is protected !!