ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳೀಯ ಶಾಸಕ ಮುನಿರತ್ನ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಪಿ ಪಾರ್ಕ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸ್ಥಳೀಯ ಶಾಸಕರಿಗೆ ತಾಳ್ಮೆ ಇಲ್ಲ. ಅವರು ಕಾರ್ಯಕ್ರಮವನ್ನು ಹಾಳು ಮಾಡಲೆಂದೇ ಬಂದಿದ್ದರು. ಇಂತಹವರನ್ನು ಆಯ್ಕೆ ಮಾಡಿದ್ದು ನಿಮ್ಮ ತಪ್ಪು, ಮುಂದೆಯಾದರೂ ಸರಿಪಡಿಸಿಕೊಳ್ಳಿ,” ಎಂದು ಮುನಿರತ್ನ ಅವರಿಗೆ ಟಾಂಗ್ ನೀಡಿದರು.
ಇದು ಸರ್ಕಾರದ ಶಿಲಾನ್ಯಾಸ ಮಾಡುವ ಕಾರ್ಯಕ್ರಮವಲ್ಲ, ಬದಲಿಗೆ ಜನರ ಸಮಸ್ಯೆಗಳನ್ನು ಆಲಿಸುವ ಕಾರ್ಯಕ್ರಮವಾಗಿದೆ. ಎಲ್ಲರಿಗೂ ನೀಡಬೇಕಾದ ಗೌರವವನ್ನು ಕೊಟ್ಟಿದ್ದೇವೆ ಎಂದು ಡಿಸಿಎಂ ತಿರುಗೇಟು ನೀಡಿದರು.
ಆರ್‌ಎಸ್‌ಎಸ್ ಸಂಸ್ಥೆಗೆ ಅಗೌರವ
ಮುನಿರತ್ನ ಅವರು ಆರ್‌ಎಸ್‌ಎಸ್ (RSS) ಸಂಸ್ಥೆಗೆ ಅಗೌರವ ತರುವ ಕೆಲಸ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು. “ಆರ್‌ಎಸ್‌ಎಸ್‌ಗೆ ಒಂದು ಇತಿಹಾಸವಿದೆ, ಅವರು ಮಾಡಬೇಕಾದ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಅವರ ಹೆಸರನ್ನು ಕೆಡಿಸುವ ಕೆಲಸ ಇಲ್ಲಿ ನಡೆಯುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಜಿಬಿಎ (ಗ್ರೇಟರ್ ಬೆಂಗಳೂರು) ಸಭೆಗೆ ಬಂದಿಲ್ಲ, ಅಲ್ಲಿ ಬಂದು ಸಮಸ್ಯೆ ಹೇಳಿಲ್ಲ, ಇಲ್ಲಿ ಬಂದು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಬೆಂಗಳೂರು ನಡಿಗೆಯಲ್ಲಿ ಜನರ ಸಮಸ್ಯೆಗಳ ಆಲಿಕೆ
ಬೆಂಗಳೂರು ನಾಗರಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಎಲ್ಲರಿಗೂ ಆಹ್ವಾನ ನೀಡಿದ್ದೇನೆ. ಬೆಳಗ್ಗೆಯಿಂದ ಎರಡು ತಾಸು ನಡೆದು ಜನರ ಸಮಸ್ಯೆಗಳನ್ನು ಕೇಳಿದ್ದೇನೆ. ಎಲ್ಲರ ಮಾಹಿತಿ ಮತ್ತು ಫೋನ್ ನಂಬರ್ ತೆಗೆದುಕೊಂಡಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಉಳಿದ ನಾಗರಿಕರು 1533ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ತಿಳಿಸಬಹುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಗುತ್ತಿಗೆದಾರರ ಬಿಲ್ ಬಾಕಿ ಕ್ಲಿಯರ್ ಮಾಡಲು ಕಮಿಷನ್ ಕೇಳುತ್ತಿದ್ದಾರೆ ಎಂಬ ಮಾಹಿತಿ ತಮ್ಮ ಗಮನಕ್ಕೆ ಬಂದಿದೆ. ಜೆಪಿ ಪಾರ್ಕ್‌ನಲ್ಲೂ ಸಾಕಷ್ಟು ಕೆಲಸಗಳು ನಿಂತಿವೆ. ಶೌಚಾಲಯ, ಸ್ವಿಮ್ಮಿಂಗ್ ಪೂಲ್, ಟ್ರ‍್ಯಾಕ್ ಸೇರಿದಂತೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಮಳೆ ನೀರು ಮತ್ತು ರಸ್ತೆ ಸಮಸ್ಯೆಗಳನ್ನು ಕೂಡ ಪರಿಹರಿಸುವುದಾಗಿ ಅವರು ಹೇಳಿದರು. ಸಾರ್ವಜನಿಕರ ಧ್ವನಿ ಸರ್ಕಾರಕ್ಕೆ ಮುಟ್ಟಬೇಕು ಮತ್ತು ಸರ್ಕಾರವು ಅದಕ್ಕೆ ಸ್ಪಂದಿಸಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.