January18, 2026
Sunday, January 18, 2026
spot_img

ಆಸೀಸ್ ವಿರುದ್ಧ ಅಬ್ಬರಿಸಿ ವಿಶ್ವ ದಾಖಲೆ ಸೃಷ್ಟಿಸಿದ ಸ್ಮೃತಿ ಮಂಧಾನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಮಹಿಳೆಯರು ಉತ್ತಮ ಆರಂಭ ಪಡೆದಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ಉಪನಾಯಕಿ ಸ್ಮೃತಿ ಮಂಧನಾ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸದ ಅದ್ಭುತ ಸಾಧನೆಯನ್ನು ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ 80 ರನ್​ಗಳ ಇನ್ನಿಂಗ್ಸ್ ಅಡಿದ ಸ್ಮೃತಿ, ಈ ವರ್ಷ ಏಕದಿನ ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಅಕ್ಟೋಬರ್ 12, ಭಾನುವಾರ ವಿಶಾಖಪಟ್ಟಣದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಲಯ ಕಂಡುಕೊಂಡ ಮಂಧಾನ ರನ್​ಗಳ ಮಳೆ ಹರಿಸಿದರು.

ಹಿಂದಿನ ಪಂದ್ಯದಲ್ಲಿಯೇ ಮಂಧಾನ ಒಂದು ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಏಕದಿನ ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ಈ ಪಂದ್ಯದಲ್ಲಿ, ಕ್ಯಾಲೆಂಡರ್ ವರ್ಷದಲ್ಲಿ 1,000 ಏಕದಿನ ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವರ್ಷ ಕೇವಲ 18 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಮಂಧಾನ ನಾಲ್ಕು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿದ್ದಾರೆ.

ವೇಗವಾಗಿ 5000 ರನ್‌ ಪೂರ್ಣ
ಈ ಪಂದ್ಯದಲ್ಲಿ ಕೇವಲ 46 ಎಸೆತಗಳಲ್ಲಿ ವಿಶ್ವಕಪ್‌ನ ಮೊದಲ ಅರ್ಧಶತಕ ಪೂರೈಸಿದ ಮಂದಾನ, 58 ರನ್​ಗಳ ಗಡಿ ದಾಟುತ್ತಿದ್ದಂತೆ ಏಕದಿನ ಕ್ರಿಕೆಟ್‌ನಲ್ಲಿ 5,000 ರನ್‌ಗಳನ್ನು ಪೂರೈಸಿದರು. ಕೇವಲ 29 ವರ್ಷ ಮತ್ತು 86 ದಿನಗಳಲ್ಲಿ 5,000 ರನ್‌ ಪೂರೈಸಿದ ಮಂಧಾನ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಮಹಿಳಾ ಕ್ರಿಕೆಟರ್ ಎಂಬ ದಾಖಲೆ ಬರೆದಿದ್ದಾರೆ. ಇದಲ್ಲದೆ, ಕೇವಲ112 ಇನ್ನಿಂಗ್ಸ್‌ಗಳು ಮತ್ತು 5,569 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಅತ್ಯಂತ ವೇಗದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್‌ನ ಸ್ಟೆಫಾನಿ ಟೇಲರ್ (129 ಇನ್ನಿಂಗ್ಸ್‌) ಮತ್ತು ನ್ಯೂಜಿಲೆಂಡ್‌ನ ಸುಜಿ ಬೇಟ್ಸ್ (6,182 ಎಸೆತಗಳು) ಅವರ ದಾಖಲೆಗಳನ್ನು ಮುರಿದರು.

Must Read

error: Content is protected !!