ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯಾಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು ಹೇಳಿ? ಮಕ್ಕಳಲ್ಲಿ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ನೀಡುವುದು ಅಪರಾಧವೇ? ಎಂದು ಪ್ರಿಯಾಂಕ್ ಖರ್ಗೆ ಅವರಿಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪ್ರಶ್ನಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮಕ್ಕಳಲ್ಲಿ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ನೀಡುವುದು ಅಪರಾಧವೇ? ನಾವು ರಾಷ್ಟ್ರದ ಘಟಕ ಎನ್ನುವುದನ್ನು ಅರ್ಥ ಮಾಡಿಸಿ ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವುದು ಸಂವಿಧಾನ ಬಾಹಿರವೇ? ನೀವೇಕೆ ಕಣ್ಣಿದ್ದು ಕುರುಡರಾಗಿದ್ದೀರಿ, ಕಿವಿ ಇದ್ದು ಕಿವುಡರಾಗಿದ್ದೀರಿ? ಎಂದು ಕೇಳಿದ್ದಾರೆ.
ನಿಮ್ಮ ಕಲ್ಬುರ್ಗಿ ಜಿಲ್ಲೆಯಲ್ಲೇ ಮತಾಂಧರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಹಾಡು ಹಗಲೇ ತೊಡಗಿಸಿಕೊಳ್ಳುತ್ತಿರುವುದು ನಿಮಗೆ ಕಾಣುವುದಿಲ್ಲವೇ? ಅಂದು ವಿಧಾನಸೌಧದ ಮೊಘಸಾಲೆಯಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ನಿಮಗೆ ಕೇಳಲಿಲ್ಲವೇ? ಆವಾಗ ಪ್ರತಿಕ್ರಿಯಿಸಲು ನಿಮ್ಮ ಬಾಯಿ ಬಿದ್ದು ಹೋಗಿತ್ತೇ? ಎಂದು ಕಿಡಿಕಾರಿದ್ದಾರೆ.
ಭಾರತ್ ಮಾತಾ ಕೀ ಜೈ ಎಂದರೆ ನಿಮ್ಮ ಪ್ರಕಾರ ಅದು ದೇಶದ್ರೋಹ. ಅದಕ್ಕಾಗಿ ಸಂಘದ ಶಾಖೆಗಳನ್ನು ನಿಷೇಧಿಸುವ ಮಾತನಾಡುತ್ತಿದ್ದೀರಿ. ಸಂಘದ ಶಾಖೆಗಳನ್ನು ನಿಷೇಧಿಸುತ್ತೇವೆಂಬ ತಿರುಕನ ಕನಸಿನಿಂದ ಮೊದಲು ಹೊರಬನ್ನಿ. ಸಂಘ ಇಂದು ಮನೆ ಮನೆಗಳನ್ನು ತಲುಪಿದೆ ಎಂದಿದ್ದಾರೆ.
ಹಲವು ತಲೆಮಾರುಗಳಿಂದ ಸಂಘವನ್ನು ಕಂಡರೆ ಉರಿದು ಬೀಳುತ್ತಿದ್ದ ನಿಮ್ಮವರೇ ತಮ್ಮ ಜೀವಮಾನದ ಕೊನೆಯಲ್ಲಿ ಬದಲಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಗಣರಾಜ್ಯದ ಪರೇಡ್ ನಲ್ಲೂ ಭಾಗವಹಿಸಲು ಅವಕಾಶ ಕೊಟ್ಟಿದ್ದಾರೆ, ಇನ್ನೂ ಕೆಲವರು ಸಂಘ ದ್ವೇಷದಿಂದ ಹೊರಬಂದು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡಿ ಹೊಗಳಿದ್ದಾರೆ ಎಂದು ಹೇಳಿದ್ದಾರೆ.