ಹೊಸ ದಿಗಂತ ವರದಿ,ಚಿತ್ರದುರ್ಗ:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಧನೆಗೆ ನೂರು ವರ್ಷದ ಸಂಭ್ರಮ ತುಂಬಿದ ಹಿನ್ನೆಲೆಯಲ್ಲಿ ಭಾನುವಾರ ಕೋಟೆ ನಗರಿ ಚಿತ್ರದುರ್ಗ ನಗರ ಮತ್ತು ಗ್ರಾಮಾಂತರ ವತಿಯಿಂದ ಆಯೋಜಿಸಿದ್ದ ಶತಾಬ್ದಿ ಪಥಸಂಚಲನದಲ್ಲಿ ಗಣವೇಷದಾರಿಗಳು ಶಿಸ್ತುಬದ್ದ ಆಕರ್ಷಕ ಪಥ ಸಂಚಲನ ನಡೆಸಿದರು.
ನಗರದ ರಂಗಯ್ಯನ ಬಾಗಿಲ ಬಳಿಯ ಸುರಕ್ಷಾ ನರ್ಸಿಂಗ್ ಕಾಲೇಜು ಆವರಣದಲ್ಲಿ ಸೇರಿದ ಸಂಘದ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಆರಂಭಿಸಿದರು. ರಂಗಯ್ಯನ ಬಾಗಿಲು ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ತರಾಸು ಬೀದಿ ಮಾರ್ಗವಾಗಿ ಏಕನಾಥೇಶ್ವರಿ ಪಾದಗುಡಿ ತಲುಪಿತು. ಬಳಿಕ ಕೋಟೆ ರಸ್ತೆ, ಕಾಮನಬಾವಿ ಬಡಾವಣೆ, ಪೋಸ್ಟ್ ಅಫೀಸ್ ರಸ್ತೆ, ಫಿಲ್ಟರ್ ಹೌಸ್ ರಸ್ತೆ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆಗೆ ಬಂದು ಸೇರಿತು. ನಂತರ ಜೋಗಿಮಟ್ಟಿ ರಸ್ತೆ, ಆಸ್ಪತ್ರೆ ವೃತ್ತದ ಮೂಲಕ ಸಾಗಿ ಮತ್ತೆ ಸುರಕ್ಷಾ ನರ್ಸಿಂಗ್ ಕಾಲೇಜು ಆವರಣ ತಲುಪಿದ ಮೆರವಣಿಗೆ ಮುಕ್ತಾಯವಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಪಥ ಸಂಚಲನ ಸಾಗುವ ದಾರಿಯಲ್ಲಿ ಮನೆಗಳ ಮುಂದೆ ಕಸ ಗುಡಿಸಿ ಸ್ವಚ್ಛ ಮಾಡಲಾಗಿತ್ತು. ಅಂಗಳಕ್ಕೆ ನೀರು ಹಾಕಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಪಥ ಸಂಚಲ ಸ್ವಾಗತಿಸಲಾಯಿತು. ಕೆಲವರ ಮನೆಯ ಮುಂದೆ ಭಾರತಾಂಬೆಯ ಭಾವಚಿತ್ರ ಇರಿಸಿ ಸ್ವಾಗತ ಕೋರಳಾಯಿತು. ಅಲ್ಲದೇ ಮೆರವಣಿಗೆಯಲ್ಲಿ ಸಾಗುವ ಗಣವೇಷಧಾರಿಗಳ ಮೇಲೆ ಪುಷ್ಪ ವೃಷ್ಟಿಗೈದು ಭಕ್ತಭಾವ ತೋರಿದರು. ಭಾರತ ಮಾತಾ ಕಿ ಜೈ, ಜೈ ಶ್ರೀರಾಮ್ ಎಂಬ ಜಯ ಘೋಷಗಳನ್ನು ಕೂಗಿ ದೇಶಪ್ರೇಮ ಮೆರೆದರು.
ಈ ಪಥ ಸಂಚಲದಲ್ಲಿ ಭಾಗವಹಿಸಿದ ಗಣವೇಷಧಾರಿಗಳು ಶುಭ್ರ ಬಿಳಿ ವರ್ಣದ ಅಂಗಿ, ಖಾಕಿ ಬಣ್ಣದ ಪ್ಯಾಂಟ್, ತಲೆಗೆ ಕಪ್ಪು ಬಣ್ಣದ ಟೋಪಿ ಧರಿಸಿದ್ದರು. ಕೈಯಲ್ಲಿ ದಂಡ ಹಿಡಿದ ಸಾವಿರಾರು ಸ್ವಯಂ ಸೇವಕರು ಶಿಸ್ತುಬದ್ದವಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ದೃಶ್ಯ ಮನ ಮೋಹಕವಾಗಿತ್ತು. ಇದರಲ್ಲಿ ಸಣ್ಣ ಸಣ್ಣ ಮಕ್ಕಳು ಸಹ ಗಣವೇಷ ಧರಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ನೋಡುಗರ ಗಮನ ಸೆಳೆಯಿತು.
ಈ ಪಥಸಂಚಲನದಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಭಾರತಾಂಬೆ, ಒನಕೆ ಓಬವ್ವ, ಡಾ.ಬಿ.ಆರ್ ಆಂಬೇಡ್ಕರ್ ಹಾಗೂ ದೇಶವನ್ನು ಕಾಯುವ ಸೈನಿಕರ ವೇಷಭೂಷಣ ಧರಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಜಿ ಹಾಗೂ ಗೂರೂಜಿಯವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಡ್ರಮ್, ತ್ರಾಶ್ ಮತ್ತಿತರ ವಾದ್ಯಗಳ ನಾದಕ್ಕೆ ತಕ್ಕಂತೆ ಗಣವೇಷಧಾರಿಗಳು ಹೆಜ್ಜೆ ಹಾಕುತ್ತಾ ಸಾಗುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಹ ಚಾಲಕರಾದ ನಾಗೇಶ್, ರಾಜಕುಮಾರ್ ರಾಮಕಿರಣ್, ಪ್ರಬಾಕರ್, ಶ್ರೀನಾಥ್, ಸಂಸದ ಉಮೇಶ್ ಕಾರಜೋಳ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಯುವ ಮುಖಂಡ ಅನಿತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ರಾಜ್ಯ ರೈತ ಮೋರ್ಚ ಕಾರ್ಯದರ್ಶಿ ಮಲ್ಲಿಕಾರ್ಜನ್, ರೈತ ಮೋರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್, ನಾಗರಾಜ್ ಸಂಗಂ, ರುದ್ರೇಶ್, ಜಿ.ಎಂ.ಸುರೇಶ್, ನಂದಿ ನಾಗರಾಜ್, ಟಿ.ಜಿ.ನರೇಂದ್ರನಾಥ್, ಬದರಿನಾಥ್, ನಾಗರಾಜ್ ಬೇದ್ರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.