ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿನಾಶಕಾರಿ ಸುರಂಗ ಮಾರ್ಗಕ್ಕೆ ಲಾಲ್‌ಬಾಗ್‌ನಲ್ಲಿ ಆರು ಎಕರೆಯಲ್ಲ, ಆರು ಇಂಚು ಭೂಮಿಯನ್ನೂ ಕಸಿದುಕೊಳ್ಳಲು ಬಿಡುವುದಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.
ಪ್ರಸ್ತಾವಿತ ಸುರಂಗ ಮಾರ್ಗದ ಲಾಲ್‌ಬಾಗ್ ಭೂ-ಸ್ವಾಧೀನಕ್ಕೆ ವಿರೋಧ ವ್ಯಕ್ತವಾಗಿದ್ದು, ಭೂವೈಜ್ಞಾನಿಕ ವರದಿ ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಗೆ ಈ ಯೋಜನೆಯಿಂದ 300 ದಶಲಕ್ಷ ವರ್ಷಗಳಷ್ಟು ಹಳೆಯದಾದ ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾದ ಲಾಲ್‌ಬಾಗ್ ಬಂಡೆಗಳ ರಚನೆಯ ಮೇಲೆ ಉಂಟಾಗುವ ಭೂವೈಜ್ಞಾನಿಕ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ನಿರ್ದೇಶನ ನೀಡಿದರು.
ಯೋಜನೆಗಾಗಿ ಕರ್ನಾಟಕ ಸರ್ಕಾರದಿಂದ ರಚಿಸಲಾದ, ಬಿ-ಸ್ಮೈಲ್ ಅಧಿಕಾರಿಗಳು, ಪರಿಸರ ಪರಿಣಾಮ ಮೌಲ್ಯಮಾಪನ ಕೈಗೊಳ್ಳದ ಕಾರಣ ಮತ್ತು ಸುರಂಗ ರ‍್ಯಾಂಪ್‌ಗಾಗಿ, ಉದ್ಯಾನವನದ ಭಾಗವನ್ನು ಗುರುತಿಸುವ ಮೊದಲು ಸಾರ್ವಜನಿಕರು ಮತ್ತು ಲಾಲ್‌ಬಾಗ್‌ನ ನಿಯಮಿತ ವಾಕಿಂಗ್ ಮಾಡುವವರೊಂದಿಗೆ ಸಮಾಲೋಚನೆ ನಡೆಸದೇ ಇರುವುದರ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದರು.
ಕರ್ನಾಟಕ ಸರ್ಕಾರ ಸುರಂಗ ಮಾರ್ಗದ ನಿರ್ಗಮನ ರ‍್ಯಾಂಪ್ ಮಾಡಲು ಬೆಂಗಳೂರಿನ ಅತ್ಯಂತ ಅಮೂಲ್ಯ ಸ್ಥಳವಾದ ಲಾಲ್‌ಬಾಗ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಈ ಯೋಜನೆಯು ನಮ್ಮ ನಗರದ ಪರಂಪರೆಯ ಭಾಗವಾಗಿರುವ, 300 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪುರಾತತ್ವ ಅದ್ಭುತವಾದ ಲಾಲ್‌ಬಾಗ್ ಬಂಡೆಗಳಿಗೆ ದೊಡ್ಡ ಅಪಾಯವನ್ನು ತಂದೊಡ್ಡುತ್ತದೆ.
ರ‍್ಯಾಂಪ್‌ನಲ್ಲಿ ಮಾಲ್‌ಗಳು ಮತ್ತು ತಿನಿಸುಗಳನ್ನು ಒಳಗೊಂಡ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲೂ ಸಹ ಸರ್ಕಾರ ಬಯಸಿದ್ದು, ಲಾಲ್‌ಬಾಗ್ ನಮ್ಮೆಲ್ಲರಿಗೂ ಸೇರಿದ್ದು, ಅದು ನಗರಕ್ಕೆ ಸೇರಿದ್ದು. ಬೆಂಗಳೂರಿನ ಜನರು ನಗರಕ್ಕೆ ವಿನಾಶವನ್ನು ತರುವ ಈ ವಿವೇಚನಾರಹಿತ ಯೋಜನೆಯ ಭಾಗವಾಗಿ ಲಾಲ್‌ಬಾಗ್‌ನ ಯಾವುದೇ ಭಾಗವನ್ನು ಬಿಟ್ಟುಕೊಡಲು ಬಯಸುವುದಿಲ್ಲ ಎಂದರು.