ಹೊಸದಿಗಂತ ವರದಿ ವಿಜಯಪುರ:
ಕಲ್ಲಿನಿಂದ ಜಜ್ಜಿ ಯುವಕರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ನಡೆದಿದೆ.
ಸಾಗರ ಬೆಳುಂಡಗಿ (25) ಹಾಗೂ ಇಸಾಕ್ ಖರೇಷಿ (24) ಮೃತಪಟ್ಟವರು.
ಹಳೆಯ ವೈಷಮ್ಯದಿಂದ ಸಾಗರ್ ಹಾಗೂ ಇಸಾಕ್ ಮೇಲೆ ಹಲ್ಲೆ ಮಾಡಿ ಕೊಲೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಹಿಂದೆ ತಮ್ಮೂರಿನ ಈರನಗೌಡ ಮೇಲೆ ಇಸಾಕ್ ಖರೇಷಿ ಹಾಗೂ ಸಾಗರ ಹಲ್ಲೆ ಮಾಡಿದ್ದರು. ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ಈರನಗೌಡ ಮೃತಪಟ್ಟಿದ್ದರು. ಈ ದ್ವೇಷದ ಕಾರಣ ಇಬ್ಬರ ಕೊಲೆ ನಡೆದಿರುವ ಬಗ್ಗೆ ಸಂಶಯ ಮೂಡಿದೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.