Wednesday, October 22, 2025

ಪ್ರಿಯಾಂಕ್ ಖರ್ಗೆ RSS ನಿಷೇಧದ ಬಗ್ಗೆ ಪತ್ರ ಬರೆದಿರೋದು ನನಗೆ ಗೊತ್ತಿಲ್ಲ: ಗೃಹ ಸಚಿವ ಪರಮೇಶ್ವರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಚಿವ ಪ್ರಿಯಾಂಕ್ ಖರ್ಗೆ ಅವರು RSS ಕಾರ್ಯಕ್ರಮಗಳನ್ನು ನಿಷೇಧಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ ಎಂಬ ವರದಿಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. “ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂಬ ವಿಷಯ ನನಗೆ ತಿಳಿದಿಲ್ಲ. ಆ ಪತ್ರ ನಮ್ಮ ಗೃಹ ಇಲಾಖೆಗೆ ಬಂದರೆ, ಅದರ ಬಗ್ಗೆ ಖಚಿತವಾಗಿ ಪರಿಶೀಲನೆ ನಡೆಸಲಾಗುವುದು,” ಎಂದು ಅವರು ತಿಳಿಸಿದ್ದಾರೆ.

ಪತ್ರದ ವಿಷಯ ಕುರಿತು ಮಾತನಾಡಿದ ಅವರು, “ಶಾಲೆಗಳಲ್ಲಿ ಅಥವಾ ಸರ್ಕಾರಿ ಜಾಗದಲ್ಲಿ RSS ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಅವರು ಹೇಳಿದ್ದಾರಂತೆ. ಆದರೆ ಇದರ ಕುರಿತು ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ಮುಖ್ಯಮಂತ್ರಿಗಳು ಅಥವಾ ಮುಖ್ಯ ಕಾರ್ಯದರ್ಶಿಗಳು ಈ ವಿಷಯದಲ್ಲಿ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಬಹುದು,” ಎಂದರು.

ಇದೇ ವೇಳೆ, RSS ಅಥವಾ ಅದರ ಘಟಕಗಳ ಮೇಲೆ ನಿಷೇಧ ಹೇರುವ ವಿಚಾರ ಇಲಾಖೆಗೆ ಬಂದರೆ ಅದರ ಸಾಧಕ-ಬಾಧಕಗಳನ್ನು ವಿಶ್ಲೇಷಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಯಾವುದೇ ದೂರು ಬಂದರೆ ನಾವು ಅದರ ಪರಿಶೀಲನೆ ಮಾಡುತ್ತೇವೆ. ವೈಯಕ್ತಿಕ ಅಭಿಪ್ರಾಯ ನೀಡುವ ಅಗತ್ಯ ಇಲ್ಲ, ಎಂದು ಸಚಿವರು ಹೇಳಿದರು.

ಸರ್ಕಾರ ಯಾವುದನ್ನಾದರೂ ನಿಷೇಧಿಸಿದರೆ ಪೊಲೀಸರು ಅನುಮತಿ ನೀಡುವುದಿಲ್ಲ. ಆದರೆ ಪ್ರಸ್ತುತ ಯಾವುದೇ ನಿಷೇಧ ಆದೇಶ ಇಲ್ಲ. ವಿಷಯ ನಮ್ಮ ಇಲಾಖೆಗೆ ಬಂದ ಬಳಿಕವೇ ಕ್ರಮ ಕೈಗೊಳ್ಳಲಾಗುವುದು, ಎಂದು ಸ್ಪಷ್ಟಪಡಿಸಿದರು.

error: Content is protected !!