Wednesday, October 22, 2025

ಕೇರಳ ಸಿಎಂ ಪುತ್ರಿಯ ಕಂಪನಿ ವಿರುದ್ಧ ತನಿಖೆಗೆ ಆದೇಶ ಪ್ರಶ್ನಿಸಿ ಮೇಲ್ಮನವಿ: ಕೇಂದ್ರಕ್ಕೆ ನೊಟೀಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ.ವೀಣಾ ಅವರು ನಿರ್ದೇಶಕಿಯಾಗಿರುವ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ವಿರುದ್ದ ವಂಚನೆ ತನಿಖಾ ವಿಭಾಗದ ಕಚೇರಿಯಿಂದ (ಎಸ್‌ಎಫ್ಐಒ) ನಡೆಯುತ್ತಿರುವ ತನಿಖೆ ರದ್ದು ಕೋರಿದ್ದ ಅರ್ಜಿ ವಜಾಗೊಳಿಸಿದ್ದ ಹೈ ಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ, ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

ವೀಣಾ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠ, ಎಸ್‌ಎಫ್‌ಐಒ ನಿರ್ದೇಶಕರು, ಕೇಂದ್ರದ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯಕ್ಕೆ ನೊಟೀಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿದೆ.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡಬೇಕು ಎಂದು ಕೋರಿದರು. ಇದಕ್ಕೆ ನಿರಾಕರಿಸಿದ ನ್ಯಾಯಪೀಠ, ಅರ್ಜಿಯನ್ನು ಏಕಸದಸ್ಯ ಪೀಠ ವಜಾಗೊಳಿಸಿದೆ. ಎಸ್‌ಎಫ್‌ಐಒ ತನಿಖೆ ಕುರಿತಂತೆ ಕಾನೂನಿನ ಪ್ರಶ್ನೆಯಿದ್ದು, ಪರಿಶೀಲಿಸಬೇಕಾಗಿದೆ. ಹೀಗಾಗಿ, ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿತು.

ವೀಣಾ ಪಿಣರಾಯಿ ವಿಜಯನ್ ನಿರ್ದೇಶಕರಾಗಿರುವ ಎಕ್ಸಲಾಜಿಕ್ ಸಲ್ಯೂಷನ್ಸ್ ಎಂಬ ಐಟಿ ಕಂಪನಿಯ ವಿರುದ್ಧ ತನಿಖೆ ನಡೆಸುವಂತೆ ‘ಗಂಭೀರ ವಂಚನೆ ತನಿಖಾ ವಿಭಾಗ’ದ ಅಧಿಕಾರಿಗಳಿಗೆ (ಎಸ್ಎಫ್ಐಒ) ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಆದೇಶಿಸಿತ್ತು.

ಕೇಂದ್ರ ಸರ್ಕಾರದ ಈ ಆದೇಶ ದೋಷಪೂರಿತವಾಗಿದೆ.ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ಧವಾಗಿದೆ. ಕೊಚ್ಚಿನ್ ಮಿನರಲ್ಸ್ ರುಟೈಲ್ ಲಿಮಿಟೆಡ್ (ಸಿಎಂಆರ್​ಎಲ್) ಮತ್ತು ಅರ್ಜಿದಾರರ ಕಂಪನಿ ನಡುವಿನ ವ್ಯವಹಾರಗಳಿಗೆ ಸಂಬಂಧಿಸಿದ 2021ರಲ್ಲಿ ಪರಿಶೀಲಿಸಿದ್ದ ಕೇಂದ್ರ ಸರ್ಕಾರದ ಸಂದರ್ಭದಲ್ಲಿ ಕಂಪನಿ ಕಾಯಿದೆಯ ವಿವಿಧ ನಿಬಂಧನೆಗಳ ಅಡಿ ತನಿಖೆ ನಡೆಸಬೇಕು ಎಂದು ಬೆಂಗಳೂರಿನ ರಿಜಿಸ್ಟ್ರಾರ್ ಅವರಿಂದ ಅರ್ಜಿದಾರರಿಗೆ ಪತ್ರ ಬರೆಯಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಅರ್ಜಿದಾರರು, ಕಂಪನಿ ರಿಜಿಸ್ಟ್ರಾರ್ ಕೇಳಿದ್ದ ಎಲ್ಲ ಮಾಹಿತಿಗಳನ್ನು ದಾಖಲೆಗಳೊಂದಿಗೆ ಸಲ್ಲಿಸಿದ್ದರು. ಆದಾಗ್ಯೂ, ಕಂಪನಿಗಳ ರಿಜಿಸ್ಟ್ರಾರ್ ಅವರು 2021ರ ಅಕ್ಟೋಬರ್ 1ರಂದು ಮತ್ತೊಂದು ಪತ್ರ ಬರೆದು, ಈವರೆಗೂ ಸಲ್ಲಿಸಿರುವ ದಾಖಲೆಗಳು ಸರಿಯಾಗಿಲ್ಲ. ಆದ ಕಾರಣ ಮುಂದಿನ 7 ದಿನಗಳಲ್ಲಿ ಎಲ್ಲ ಸರಿಯಾದ ದಾಖಲೆಗಳನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದ್ದರು. ಅಲ್ಲದೆ, 2022ರ ಜೂನ್ 24ರಂದು ಅರ್ಜಿದಾರರು ತಮ್ಮ ಪ್ರತಿನಿಧಿಗಳೊಂದಿಗೆ ಖುದ್ದು ಹಾಜರಾಗಿ ಅಗತ್ಯವಿರುವ ದಾಖಲೆಗಳೊಂದಿಗೆ ಎಲ್ಲ ವಿವರಣೆ ಮತ್ತು ಸ್ಪಷ್ಟೀಕರಣಗಳನ್ನು ನೀಡಿದ್ದರು.

ಆದರೆ, ಅರ್ಜಿದಾರ ಕಂಪನಿಯ ನಿರ್ದೇಶಕರ ತಂದೆಯ ಅಧೀನದಲ್ಲಿರುವ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್ಐಡಿಸಿ)ವು ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್​​ನಲ್ಲಿ ಶೇ.13.4ರಷ್ಟು ಷೇರುಗಳನ್ನು ಹೊಂದಿದೆ ಎಂದು ಆರೋಪಿಸಿ ರಿಜಿಸ್ಟ್ರಾರ್ ಅವರು 2023ರ ಆಗಸ್ಟ್ ತಿಂಗಳಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು. ನೊಟೀಸ್ ​ಗೆ ಸಂಬಂಧಿಸಿದಂತೆ ಅರ್ಜಿದಾರ ಕಂಪನಿ ವಿವರಣೆ ನೀಡಿತ್ತು. ಆದರೆ, ಕೈಗಾರಿಕಾ ಅಭಿವೃದ್ಧಿ ನಿಗಮ (ಕೆಎಸ್ಐಡಿಸಿ)ವು ಕೊಚ್ಚಿನ್ ಮಿನರಲ್ಸ್ ಮತ್ತು ರುಟೈಲ್ ಲಿಮಿಟೆಡ್ ವ್ಯವಹಾರಗಳ ಕುರಿತಂತೆ ತನಿಖೆಯನ್ನು ಪ್ರಾರಂಭಿಸಲು ಆದೇಶ ಹೊರಡಿಸಲಾಗಿತ್ತು. ಜೊತೆಗೆ, ಈ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ತನಿಖಾಧಿಕಾರಿ ಕೆ.ಪ್ರಭು ಎಂಬವರು ನೊಟೀಸ್ ನೀಡಿದ್ದರು. ಈ ಸಂಬಂಧ ಅರ್ಜಿದಾರರು ದಾಖಲೆಗಳನ್ನು ಒದಗಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ನಡುವೆ ಕಂಪನಿ ರಿಜಿಸ್ಟ್ರಾರ್ ತನಿಖೆ ಹೊರಡಿಸಿರುವ ಆದೇಶ ಮತ್ತು ಅದರ ಮುಂದಿನ ಪ್ರಕ್ರಿಯೆಗೆ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನು ಪ್ರಶ್ನಿಸಿ ಎಕ್ಸಲಾಜಿಕ್‌ ಸಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯನ್ನು 2024ರ ಪೆಬ್ರವರಿ 16ರಂದು ವಜಾಗೊಳಿಸಿ ಆದೇಶಿಸಿತ್ತು. ಇದೀಗ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

error: Content is protected !!