ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನವು ಭಾರತದ ಮೇಲೆ ಮತ್ತೊಂದು ಪಹಲ್ಗಾಮ್ ನ ಭಯೋತ್ಪಾದಕ ದಾಳಿಯಂತೆ ದಾಳಿ ನಡೆಸಲು ಸಂಚು ರೂಪಿಸಿದೆ. ಮತ್ತೆ ಇಂತಹ ದಾಳಿಯಾದರೆ ಅದಕ್ಕೆ ತಕ್ಕ ಉತ್ತರ ನೀಡಲು ಭಾರತ ಸಿದ್ಧವಾಗಿದೆ ಎಂದು ಪಶ್ಚಿಮ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಕಟಿಯಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಅದಕ್ಕೆ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡಿತ್ತು.
ಇದೀಗ ಮತ್ತೊಂದು ದಾಳಿ ನಡೆಸಲು ಪಾಕಿಸ್ತಾನ ಪ್ರಯತ್ನಿಸಬಹುದು ಎಂದು ಹೇಳಿರುವ ಮನೋಜ್ ಕುಮಾರ್ ಕಟಿಯಾರ್, ಗಡಿಯಾಚೆಯಿಂದ ನಡೆಯುವ ಯಾವುದೇ ಹೊಸ ದಾಳಿಗೆ ಭಾರತ ಬಲವಾದ ಪ್ರತಿಕ್ರಿಯೆ ನೀಡಲು ಸಿದ್ಧವಾಗಿದೆ ಎಂದು ಎಚ್ಚರಿಸಿದ್ದಾರೆ.
ಪಶ್ಚಿಮ ಗಡಿಯಲ್ಲಿ ನಡೆಸಿರುವ ಭಾರತದ ದೊಡ್ಡ ಪ್ರಮಾಣದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಾದ ಆಪರೇಷನ್ ಸಿಂದೂರ್ ಕುರಿತು ಮಾತನಾಡಿದ ಅವರು, ಆಪರೇಷನ್ ಸಿಂದೂರ್ ನಲ್ಲಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಯಿತು. ಆದರೆ ಪಾಕಿಸ್ತಾನ ಎಂದಿಗೂ ತನ್ನ ಮಾರ್ಗಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಪಾಕಿಸ್ತಾನ ನಡೆಸಬಹುದಾದ ಪ್ರತಿಯೊಂದು ನಡೆಗಳ ಮೇಲೆ ನಾವು ನಮ್ಮ ಕಣ್ಣಿಟ್ಟಿದ್ದೇವೆ. ಮತ್ತೆ ಅಂತಹ ದುಷ್ಕೃತ್ಯದಲ್ಲಿ ತೊಡಗಿದರೆ ಅದಕ್ಕೆ ಬಲವಾದ ಪ್ರತಿಕ್ರಿಯೆ ನೀಡಲಾಗುವುದು ಎಂದರು.
ಪಾಕಿಸ್ತಾನವು ತನ್ನ ಸ್ವಂತ ಹಿತಾಸಕ್ತಿಗಳಿಗಾಗಿ ಭಾರತದೊಂದಿಗೆ ಮುಖಾಮುಖಿಯಾಗಲು ಬಯಸುತ್ತದೆ. ಇನ್ನು ಅದು ಯಾವುದೇ ರೀತಿಯ ದುಸ್ಸಾಹಸವನ್ನು ಮಾಡಬಾರದು. ‘ಆಪರೇಷನ್ ಸಿಂದೂರ್’ ಇನ್ನೂ ಕೊನೆಗೊಂಡಿಲ್ಲ ಎಂದು ಅವರು ಹೇಳಿದರು.