Thursday, October 23, 2025

ಉದ್ಯಮಿ ಕಿರಣ್​ ಮಜುಂದಾರ್ ಶಾ ​ ಪೋಸ್ಟ್​ಗೆ ಡಿಸಿಎಂ ಡಿಕೆ ಶಿವಕುಮಾರ್‌ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಲ್ಲಿ ರಸ್ತೆ ಗುಂಡಿ ಮತ್ತು ಕಸದ ಸಮಸ್ಯೆ ಬಗ್ಗೆ ಉದ್ಯಮಿ ಕಿರಣ್​ ಮಜುಂದಾರ್ ಶಾ ಮಾಡಿದ್ದ ಪೋಸ್ಟ್​ಗೆ ಡಿಸಿಎಂ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರನ್ನು ಕೆಡವುದರ ಬದಲು, ಒಟ್ಟಾಗಿ ನಿರ್ಮಿಸೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಒಗ್ಗಟ್ಟಿನಿಂದ ಎತ್ತರಕ್ಕೇರಲು ನಮ್ಮ ಬೆಂಗಳೂರಿಗೆ ನಾವು ಋಣಿಯಾಗಿದ್ದೇವೆ. ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶಗಳನ್ನ ನೀಡಿದೆ. ಅವರದ್ದೇ ಆದ ವ್ಯಕ್ತಿತ್ವ ಗುರುತಿಸಿ ಯಶಸ್ಸನ್ನು ನೀಡಿದೆ. ಬೆಂಗಳೂರು ನಿರಂತರ ಟೀಕೆಗೆ ಇರುವ ನಗರವಲ್ಲ. ಸಾಮೂಹಿಕ ಪ್ರಯತ್ನಕ್ಕೆ ಅರ್ಹವಾದ ನಗರ ಎಂದಿದ್ದಾರೆ.

ಹೌದು, ಸವಾಲುಗಳು ನಮಗೆ ಇವೆ. ನಾವು ಅವುಗಳನ್ನ ಗಮನದಲ್ಲಿಟ್ಟುಕೊಂಡು, ತುರ್ತಾಗಿ ಪರಿಹರಿಸುತ್ತಿದ್ದೇವೆ. ರಸ್ತೆ ದುರಸ್ತಿಗಾಗಿ 1,100 ಕೋಟಿ ರೂ. ಮಂಜೂರಾಗಿದೆ. 10000+ ಗುಂಡಿಗಳನ್ನು ಗುರುತಿಸಲಾಗಿದೆ. 5000ಕ್ಕೂ ಹೆಚ್ಚು ಗುಂಡಿಗಳನ್ನ ಈಗಾಗಲೇ ಆದ್ಯತೆಯ ಮೇಲೆ ಮುಚ್ಚಲಾಗಿದೆ . ಮಹತ್ವದ ಯೋಜನೆಯ ಕೆಲಸ ಕಾರ್ಯಗಳು ಮುಂದುವರಿದಿದ್ದು, ಬೆಂಗಳೂರು ಪೂರ್ವ ಪಾಲಿಕೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ಈ ಭಾಗದ ಐಟಿ-ಬಿಟಿ ಕಂಪನಿಗಳಿಗೆ ಇದರಿಂದ ಸಹಾಯ ಆಗ್ತಿದೆ ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.

ಬೆಂಗಳೂರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಬೆಳೆಯಲು ಪ್ರಮುಖ ಮೂಲಸೌಕರ್ಯ ಕಾರ್ಯಗಳು ನಡೆಯುತ್ತಿವೆ. ಬೃಹತ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪೂರ್ವ 50 ವಾರ್ಡ್‌ಗಳಲ್ಲಿ ಮೂಲಸೌಕರ್ಯವನ್ನು ನೇರವಾಗಿ ಸುಧಾರಿಸಲು ಈಗ 1,673 ಕೋಟಿ ರೂ. ಸ್ವಂತ ಆದಾಯವನ್ನು ಉಳಿಸಿಕೊಳ್ಳಲಿದೆ. ನಮ್ಮ ಐಟಿ ಕಾರಿಡಾರ್‌ಗಳಿಗೆ ನೇರವಾಗಿ ಪ್ರಯೋಜನವಾಗಲಿದೆ. ಸಿಎಸ್‌ಬಿ-ಕೆಆರ್ ಪುರಂಎಲಿವೇಟೆಡ್ ಕಾರಿಡಾರ್‌ಗಳಂತಹ ಪ್ರಮುಖ ಕಾರ್ಯಗಳು ನಡೆಯತ್ತಿವೆ. ನಾವು ನಾಗರಿಕರು, ಉದ್ಯೋಗಿಗಳು ಮತ್ತು ಕಂಪನಿಗಳಿಗೆ ಮೂಲಸೌಕರ್ಯವನ್ನು ಬಲಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಕಿರಣ್​ ಮಜುಂದಾರ್​ ಶಾ ಪೋಸ್ಟ್​ನಲ್ಲಿ ಏನಿತ್ತು?
ಬಯೋಕಾನ್​ ಪಾರ್ಕ್​ಗೆ ಚೀನಾದಿಂದ ಬಂದಿದ್ದ ಉದ್ಯಮಿಯೊಬ್ಬರು ತಮಗೆ ಕೇಳಿದ್ದ ಪ್ರಶ್ನೆ ಬಗ್ಗೆ ಕಿರಣ್​ ಮಜುಂದಾರ್​ ಶಾ ಪೋಸ್ಟ್​ನಲ್ಲಿ ಉಲ್ಲೇಖಿಸಿದ್ದರು. ಯಾಕೆ ಬೆಂಗಳೂರು ನಗರದ ರಸ್ತೆಗಳು ಹಾಳಾಗಿವೆ? ಕಂಡ‌ ಕಂಡಲ್ಲಿ‌ ಕಸದ ರಾಶಿ ಯಾಕಿದೆ? ಇಲ್ಲಿನ ಸರ್ಕಾರ ಹೂಡಿಕೆದಾರರಿಗೆ ಬೆಂಬಲ ನೀಡುತ್ತಿಲ್ಲವೇ ಎಂದು ನನ್ನನ್ನು ಚೀನಾ ಉದ್ಯಮಿ ಪ್ರಶ್ನಿಸಿದ್ದಾಗಿ ಅವರು ಹೇಳಿಕೊಂಡಿದ್ದರು. ಅಲ್ಲದೆ ಈ ಪೋಸ್ಟ್​ನ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್​ ಮತ್ತು ಸಚಿವ ಪ್ರಿಯಾಂಕ್ ಖರ್ಗೆಗೆ ಟ್ಯಾಗ್ ಕೂಡ ಮಾಡಿದ್ದರು.

error: Content is protected !!