Thursday, October 23, 2025

ಫೋನ್ ಟ್ಯಾಪಿಂಗ್ ಪ್ರಕರಣ: ಅಲೋಕ್‌ ಕುಮಾರ್‌ ವಿರುದ್ಧದ ತನಿಖಾ ಆದೇಶ ರದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅಲೋಕ್ ಕುಮಾರ್ ವಿರುದ್ಧದ ಇಲಾಖಾ ತನಿಖೆ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ರದ್ದು ಮಾಡಿದೆ.

2018-19 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಿದ್ದಾಗ ಅಲೋಕ್ ಕುಮಾರ್ ಬೆಂಗಳೂರು ಪೊಲೀಸ್ ಅಯುಕ್ತರಾಗಿದ್ದರು. ಈ ವೇಳೆ ಎಡಿಜಿಪಿ ಭಾಸ್ಕರ್ ರಾವ್ ಫೋನ್ ಟ್ಯಾಪಿಂಗ್ ಮಾಡಿದ್ದ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ಸಿಬಿಐ ತನಿಖೆಯಾಗಿ 2024 ರಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಲಾಗಿತ್ತು.

ಕಳೆದ ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಭಾಸ್ಕರ್ ರಾವ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣವನ್ನ ಇಲಾಖಾ ತನಿಖೆಗೆ ಆದೇಶಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಅಲೋಕ್‌ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಇಬ್ಬರು ನ್ಯಾಯಾಧೀಶರ ನಡುವೆ ವಿಭಿನ್ನ ತೀರ್ಪು ಬಂದ ಹಿನ್ನೆಲೆ, ಸಿಎಟಿ ಚೇರ್‌ಮನ್ ನ್ಯಾಯಮೂರ್ತಿ ರಣಜೀತ್‌ರಿಗೆ ಕೇಸ್ ವರ್ಗಾವಣೆಯಾಗಿತ್ತು. ಡಿಜಿಪಿ ಹುದ್ದೆಗೆ ಬಡ್ತಿ ತಡೆಯಲು ಅಲೋಕ್ ವಿರುದ್ಧ ಸರ್ಕಾರ ಇಲಾಖಾ ವಿಚಾರಣೆಗೆ ಆದೇಶ ನೀಡಿದೆ ಅಂತಾ ಅಲೋಕ್ ಕುಮಾರ್ ಪರ ವಕೀಲರು ವಾದ ಮಂಡಿಸಿದ್ದರು.

ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು, ಸರ್ಕಾರದ ಇಲಾಖಾ ತನಿಖೆ ಆದೇಶ ರದ್ದುಗೊಳಿಸಿ‌ ಆದೇಶ ಹೊರಡಿಸಿದ್ದಾರೆ.
ಅಲೋಕ್ ಕುಮಾರ್‌ಗೆ ಸಲ್ಲಬೇಕಾದ ಬಡ್ತಿ ಸವಲತ್ತುಗಳನ್ನ ನೀಡುವಂತೆ ಸಹ ಆದೇಶಿಸಿದ್ದಾರೆ.

error: Content is protected !!