Thursday, October 23, 2025

ದಿಲ್ಲಿಯ ಭಾರತ ಮಂಟಪದಲ್ಲಿ ವಿಶ್ವದ ಎರಡನೇ ಅತಿದೊಡ್ಡ ರೈಲ್ವೆ ಪ್ರದರ್ಶನಕ್ಕೆ ಸಚಿವ ಅಶ್ವಿನಿ ಚಾಲನೆ


ಹೊಸದಿಗಂತ ಡಿಜಿಟಲ್ ಡೆಸ್ಕ್:


ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ರೈಲ್ವೆಯ ಆಧುನೀಕರಣದ ಮೇಲೆ ಹೆಚ್ಚಿನ ಗಮನ ಹರಿಸಿದ್ದು, ರೈಲ್ವೆಯನ್ನು ತ್ವರಿತಗತಿಯಲ್ಲಿ ಆಧುನೀಕರಿಸಲು ಪ್ರಸ್ತುತ ಪ್ರತಿ ವರ್ಷ ಎರಡು ಲಕ್ಷ 56 ಸಾವಿರ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.


ದಿಲ್ಲಿಯ ಭಾರತ ಮಂಟಪದಲ್ಲಿ ಏಷ್ಯಾದ ಅತಿದೊಡ್ಡ ಮತ್ತು ವಿಶ್ವದ ಎರಡನೇ ಅತಿದೊಡ್ಡ ರೈಲ್ವೆ ಪ್ರದರ್ಶನವಾದ 16 ನೇ ಅಂತಾರಾಷ್ಟ್ರೀಯ ರೈಲ್ವೆ ಸಲಕರಣೆಗಳ ಪ್ರದರ್ಶನವನ್ನು ಉದ್ಘಾಟಿಸಿದ ಸಚಿವರು, ಕಳೆದೊಂದು ದಶಕದಲ್ಲಿ ಸುಮಾರು 35 ಸಾವಿರ ಕಿಲೋಮೀಟರ್ ಹಳಿಗಳನ್ನು ನಿರ್ಮಿಸಲಾಗಿದೆ. 46 ಸಾವಿರ ಕಿಲೋಮೀಟರ್ ರೈಲ್ವೆ ಹಳಿಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದರು.


ರೈಲ್ವೆ ಪ್ರಮುಖ ರಫ್ತು ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇತ್ತೀಚೆಗೆ ಭಾರತದಲ್ಲಿ ತಯಾರಿಸಿದ ಲೋಕೋಮೋಟಿವ್ ಅನ್ನು ಆಫ್ರಿಕಾಕ್ಕೆ ರಫ್ತು ಮಾಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.


ಈ ಪ್ರದರ್ಶನದ ಕುರಿತು ಮಾಹಿತಿ ನೀಡಿದ ಸಚಿವರು, ಈ ಪ್ರದರ್ಶನವು ಭಾರತದ ರೈಲು ತಂತ್ರಜ್ಞಾನಗಳು ಮತ್ತು ಉತ್ಪಾದನಾ ಶಕ್ತಿಯನ್ನು ವಿವರಿಸುತ್ತಿದೆ ಎಂದರು. ಈ ಸಮ್ಮೇಳನವು ಜಾಗತಿಕ ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸುತ್ತದೆ ಮತ್ತು ಪಾಲುದಾರಿಕೆ ಅವಕಾಶಗಳನ್ನು ಒದಗಿಸಲು ಸಹಕಾರಿಯಾಗಿದೆ ಎಂದರು.


15 ಕ್ಕೂ ಹೆಚ್ಚು ದೇಶಗಳಲ್ಲಿ 450 ಕ್ಕೂ ಹೆಚ್ಚು ಪ್ರದರ್ಶಕರು, ಅತ್ಯಾಧುನಿಕ ರೈಲ್ವೆ ಮತ್ತು ಮೆಟ್ರೋ ಉತ್ಪನ್ನಗಳು, ನಾವೀನ್ಯತೆಗಳು ಮತ್ತು ಸುಸ್ಥಿರ ಪರಿಹಾರಗಳನ್ನು ಪ್ರದರ್ಶಿಸುತ್ತಿದ್ದಾರೆ. ಮೂರು ದಿನಗಳ ಪ್ರದರ್ಶನದಲ್ಲಿ, ರೈಲ್ವೆ ಸಚಿವಾಲಯವು ಅಮೃತ್ ಭಾರತ್ ಮತ್ತು ತೇಜಸ್ ಕೋಚ್, ವಂದೇ ಭಾರತ್ ರೈಲು, ಕೋಲ್ಕತ್ತಾ ಮೆಟ್ರೋ ಮತ್ತು ನಮೋ ಭಾರತ್ ರೈಲುಗಳನ್ನು ಪ್ರದರ್ಶಿಸುತ್ತಿದೆ. ಈ ಪ್ರದರ್ಶನವು ಭಾರತೀಯ ತಯಾರಕರಿಗೆ ಜಾಗತಿಕ ಮಟ್ಟದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಅವಕಾಶ ಒದಗಿಸುತ್ತದೆ.

error: Content is protected !!