ಹೊಸದಿಗಂತ ಚಿತ್ರದುರ್ಗ:
ಸರ್ಕಾರಿ ಕಚೇರಿಯನ್ನು ವೈಯಕ್ತಿಕ ಮೋಜು ಮಸ್ತಿಗಾಗಿ ದುರುಪಯೋಗಪಡಿಸಿಕೊಂಡ ಆಘಾತಕಾರಿ ಘಟನೆಯೊಂದು ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ (ಡಿಡಿಪಿಐ) ಕಚೇರಿಯಲ್ಲಿ ನಡೆದಿದೆ. ಕಚೇರಿ ಆವರಣದಲ್ಲೇ ಸಿಬ್ಬಂದಿ ಮದ್ಯಪಾನ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಘಟನೆ ಮತ್ತು ಕ್ರಮ
ಕಚೇರಿಯ ಸಿಬ್ಬಂದಿಯೊಬ್ಬರು ಹೊಸ ಕಾರು ಖರೀದಿಸಿದ ಹಿನ್ನೆಲೆಯಲ್ಲಿ ಈ ಅನಧಿಕೃತ ‘ಪಾರ್ಟಿ’ ಆಯೋಜಿಸಲಾಗಿತ್ತು. ಸಿಬ್ಬಂದಿಯು ಮದ್ಯ ಬೆರೆಸಿದ ವಾಟರ್‌ಕ್ಯಾನ್ ಅನ್ನು ಕಚೇರಿಗೆ ತಂದಿದ್ದು, ಕಚೇರಿಯ ಜೀಪ್ ಶೆಡ್‌ನಲ್ಲಿ ಮದ್ಯ ಸೇವಿಸಿ ಮೋಜು ಮಾಡಿದ್ದಾರೆ ಎನ್ನಲಾಗಿದೆ. 20 ಲೀಟರ್ ಕುಡಿಯುವ ನೀರಿನ ಕ್ಯಾನ್‌ಗೆ ಬಿಯರ್ ಹಾಕಿ ಕುಡಿಯುವ ದೃಶ್ಯ, ನಂತರ ಅದನ್ನು ಕಾರಿಗೆ ಸ್ಥಳಾಂತರಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಡಿಡಿಪಿಐ ಮಂಜುನಾಥ್ ಅವರು ತಕ್ಷಣವೇ ಶಿಸ್ತು ಕ್ರಮ ಕೈಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಐವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಅಮಾನತುಗೊಂಡ ಸಿಬ್ಬಂದಿ ವಿವರ:
ರವಿಕುಮಾರ್ (ವಾಹನ ಚಾಲಕ)
ಗಣೇಶ್ (ಪ್ರಥಮ ದರ್ಜೆ ಸಹಾಯಕ)
ತಿಪ್ಪೇಸ್ವಾಮಿ (ಡಿ ಗ್ರೂಪ್ ನೌಕರ)
ಸ್ವಾಮಿ (ಪ್ರಥಮ ದರ್ಜೆ ಸಹಾಯಕ)
ಸುನೀಲ್ ಕುಮಾರ್ (ಸೂಪರಿಂಟೆಂಡೆಂಟ್)
ಡಿಡಿಪಿಐ ವರ್ತನೆಯಿಂದ ಅನುಮಾನ
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಡಿಡಿಪಿಐ ಆರ್. ಮಂಜುನಾಥ್ ಅವರನ್ನು ಸಂಪರ್ಕಿಸಿದಾಗ ಅವರು ಮೊದಲು ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ನಂತರ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಎಂದು ಹೇಳಿದರೂ, ಅಮಾನತುಗೊಂಡ ಸಿಬ್ಬಂದಿಯ ಹೆಸರುಗಳನ್ನು ನೀಡಲು ನುಣುಚಿಕೊಂಡು ಫೋನ್ ಕಟ್ ಮಾಡಿದ್ದಾರೆ. ಡಿಡಿಪಿಐ ಅವರ ಈ ನಡೆ ಘಟನೆಯ ಕುರಿತು ಮಾಹಿತಿ ಮುಚ್ಚಿಡುವ ಪ್ರಯತ್ನವೇ ಎಂಬ ಅನುಮಾನಗಳಿಗೆ ಕಾರಣವಾಗಿದೆ. ತಪ್ಪೆಸಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅವರ ಬದ್ಧತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.