Thursday, October 23, 2025

ಕೇದಾರನಾಥ ಯಾತ್ರಿಗಳಿಗೆ ಗುಡ್‌ ನ್ಯೂಸ್: ಮಹಾದೇವನ ದರುಶನ ಇನ್ನು ಸುಗಮ, ನಿರಾಳ ಪಯಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿಮಾಲಯದ ಕಠಿಣ ಹಾದಿಯಲ್ಲಿರುವ ಪುಣ್ಯಕ್ಷೇತ್ರ ಕೇದಾರನಾಥ ಧಾಮದ ಯಾತ್ರೆ ಈಗ ಸುಲಭ ಮತ್ತು ಸುರಕ್ಷಿತವಾಗಲಿದೆ. ಭಕ್ತರ ಅನುಕೂಲಕ್ಕಾಗಿ, ಅದಾನಿ ಗ್ರೂಪ್ ಕೇದಾರನಾಥ ಧಾಮಕ್ಕೆ 12.9 ಕಿಲೋಮೀಟರ್ ಉದ್ದದ ರೋಪ್‌ವೇ ನಿರ್ಮಿಸುವುದಾಗಿ ಘೋಷಿಸಿದೆ.

ಈ ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ ಅದಾನಿ ಗ್ರೂಪ್‌ನ ಅಧ್ಯಕ್ಷರಾದ ಗೌತಮ್ ಅದಾನಿ ಅವರು ಇತ್ತೀಚೆಗೆ ತಮ್ಮ ‘X’ ಖಾತೆಯಲ್ಲಿ ಸಂದೇಶ ಹಂಚಿಕೊಂಡಿದ್ದಾರೆ. “ಕೇದಾರನಾಥ ಧಾಮದ ಕಠಿಣವಾದ ಆರೋಹಣವು ಈಗ ಸುಲಭವಾಗಲಿದೆ. ಈ ಮಹತ್ವದ ಯೋಜನೆ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ. ಎಲ್ಲರಿಗೂ ಭಗವಾನ್‌ ಮಹಾದೇವನ ಆಶೀರ್ವಾದ ಇರಲಿ. ಜೈ ಬಾಬಾ ಕೇದಾರನಾಥ,” ಎಂದು ಅವರು ತಿಳಿಸಿದ್ದಾರೆ.

ಸುಮಾರು 11,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ, ಅಪಾರ ಧಾರ್ಮಿಕ ಮಹತ್ವವನ್ನು ಹೊಂದಿರುವ ಈ ಶಿವನ ದೇವಾಲಯದ ಯಾತ್ರೆಯನ್ನು ಈ ರೋಪ್‌ವೇ ಮೂಲಕ ಲಕ್ಷಾಂತರ ಭಕ್ತರು ಇನ್ನು ಸುಗಮವಾಗಿ ಕೈಗೊಳ್ಳಬಹುದು.

ಇದೇ ವೇಳೆ, ಶ್ರೀ ಬದರಿನಾಥ ಕೇದಾರನಾಥ ದೇವಾಲಯ ಸಮಿತಿಯು ಒಂದು ಮಹತ್ವದ ಮಾಹಿತಿಯನ್ನು ನೀಡಿದೆ. ಮುಂಬರುವ ಚಳಿಗಾಲದ ಹಿನ್ನೆಲೆ ಅಕ್ಟೋಬರ್ 23 ರಂದು ಕೇದಾರನಾಥ ಧಾಮದ ದ್ವಾರಗಳನ್ನು ಮುಚ್ಚಲಾಗುವುದು ಎಂದು ಸಮಿತಿ ತಿಳಿಸಿದೆ.

ದ್ವಾರಗಳನ್ನು ಮುಚ್ಚುವ ದಿನಾಂಕವನ್ನು ಅಂತಿಮಗೊಳಿಸಲು ಬದರಿನಾಥ ದೇವಾಲಯದ ಆವರಣದಲ್ಲಿ ಭವ್ಯ ಧಾರ್ಮಿಕ ಸಮಾರಂಭವನ್ನು ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿಗಳು ಮತ್ತು ವೇದ ವಿದ್ವಾಂಸರು BKTCಯ ಅಧಿಕಾರಿಗಳ ಸಮ್ಮುಖದಲ್ಲಿ ಪಂಚಾಂಗ ಲೆಕ್ಕಾಚಾರಗಳ ಆಧಾರದ ಮೇಲೆ ಈ ನಿರ್ಧಾರವನ್ನು ಅಂತಿಮಗೊಳಿಸಿದರು.

error: Content is protected !!