ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಮಹಾನಗರದಲ್ಲಿನ ಬಿ-ಖಾತಾ ಆಸ್ತಿಗಳ ಮಾಲೀಕರಿಗೆ ರಾಜ್ಯ ಸರ್ಕಾರವು ದೀಪಾವಳಿಯ ಭರ್ಜರಿ ಕೊಡುಗೆಯನ್ನು ನೀಡಿದೆ. ನವೆಂಬರ್ 1 ರಿಂದ, ಐತಿಹಾಸಿಕ ನಿರ್ಧಾರದ ಮೂಲಕ ಬಿ-ಖಾತೆಗಳನ್ನು ಎ-ಖಾತೆಗಳಾಗಿ ಪರಿವರ್ತಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಬೆಂಗಳೂರಿನ ಸುಮಾರು 15 ಲಕ್ಷಕ್ಕೂ ಹೆಚ್ಚು ಆಸ್ತಿಗಳ ಮಾಲೀಕರಿಗೆ ಇದರಿಂದ ಅನುಕೂಲವಾಗಲಿದ್ದು, ಇದು ‘ಕ್ರಾಂತಿಕಾರಕ ತೀರ್ಮಾನ’ ಮತ್ತು ‘ಆಸ್ತಿ ಶುದ್ಧೀಕರಣಕ್ಕೆ ನಾಂದಿ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಣ್ಣಿಸಿದ್ದಾರೆ.
ವಿಧಾನಸೌಧದಲ್ಲಿ, ಬಿಬಿಎಂಪಿ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ಖಾತಾ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ-ಖಾತಾ ನೀಡುವ ಹೊಸ ಆನ್‌ಲೈನ್ ವ್ಯವಸ್ಥೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿದರು.
ಪ್ರಮುಖ ಅಂಶಗಳು:
ಆಸ್ತಿ ವಿಸ್ತೀರ್ಣ: 2,000 ಚದರ ಅಡಿ ವಿಸ್ತೀರ್ಣದವರೆಗಿನ ಆಸ್ತಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರಲಿವೆ.
ಹೆಚ್ಚಿನ ವಿಸ್ತೀರ್ಣ: 2,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಆಸ್ತಿಗಳಿಗೆ ನಕ್ಷೆ ಸೇರಿದಂತೆ ಇತರೆ ಅಗತ್ಯ ದಾಖಲೆಗಳನ್ನು ಒದಗಿಸಬೇಕು.
ಅಭಿಯಾನದ ಅವಧಿ: ಈ ಪರಿವರ್ತನಾ ಅಭಿಯಾನವು ನವೆಂಬರ್ 1 ರಿಂದ ಆರಂಭಗೊಂಡು 100 ದಿನಗಳ ಕಾಲ ನಡೆಯಲಿದೆ.
ಕಾಂಗ್ರೆಸ್‌ನ 6ನೇ ಗ್ಯಾರಂಟಿ: ಮಾರ್ಗಸೂಚಿ ದರಕ್ಕೆ ಶೇ.5ರಷ್ಟು ಶುಲ್ಕ ಈ ಖಾತಾ ಪರಿವರ್ತನೆಯನ್ನು ಡಿಕೆಶಿ ಅವರು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಎಂದು ಘೋಷಿಸಿದ್ದಾರೆ.
ಶುಲ್ಕದ ವಿವರ: ಸದ್ಯಕ್ಕೆ, ಬಿ-ಖಾತಾದಿಂದ ಎ-ಖಾತಾಕ್ಕೆ ಪರಿವರ್ತನೆಗೆ ಮಾರ್ಗಸೂಚಿ ದರಕ್ಕೆ ಶೇ.5ರಷ್ಟು ಹಣವನ್ನು ಶುಲ್ಕವಾಗಿ ಪಾವತಿಸಬೇಕು.
100 ದಿನಗಳ ನಂತರ: 100 ದಿನಗಳ ಅಭಿಯಾನದ ನಂತರ, ಪರಿವರ್ತನಾ ಶುಲ್ಕದಲ್ಲಿ ಹೆಚ್ಚಳವಾಗಲಿದ್ದು, ಹೆಚ್ಚುವರಿ ಶುಲ್ಕವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಮೂಲಕ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ-ಖಾತಾ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ.


