January20, 2026
Tuesday, January 20, 2026
spot_img

ʼಜೈಲಿಗೆ ಹೋಗ್ತೀಯಾ? ಡಿಸಿಎಂ ಆಗ್ತೀಯಾ ಎಂದು ಬಿಜೆಪಿಯಿಂದ ಫೋನ್‌ ಬಂದಿತ್ತುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ವೇಳೆ ಪಕ್ಷ ನಿಷ್ಠನಾಗಿ ಜೈಲುವಾಸ ಆಯ್ಕೆ ಮಾಡಿಕೊಂಡೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ಆಫರ್‌ ಬಗ್ಗೆ ಹೊಸ ವಿಷಯ ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ 10 ಜನ‌ ಶಾಸಕರು ರಾಜಿನಾಮೆ ನೀಡಲು ಹೊರಟಿದ್ದರು. ಕನಕಪುರದಲ್ಲಿದ್ದ ನಾನು ಬೆಂಗಳೂರಿಗೆ ಬಂದು ಐದಾರು ಜನರನ್ನು ವಾಪಸ್ ಕ್ವಾಟ್ರಸ್‌ಗೆ ಕರೆದುಕೊಂಡು ಬಂದೆ.‌ ಆಗ ನನಗೆ ಒಬ್ಬ ಆದಾಯ ತೆರಿಗೆ ಆಡಿಟರ್ ಫೋನ್ ನಿಂದ ಕರೆ ಬಂದಿತ್ತು.

ಬಿಜೆಪಿಯ ಯಾರಿಂದ ಬಂತು ಅಂತ ಹೆಸರು ಹೇಳೋದು ಬೇಡ ಈಗ. ನನ್ನ ಜೊತೆ ಡಿಜಿಯೂ ಇದ್ದ‌ರು, ಡಿಕೆ ಸುರೇಶ್‌ ಕೂಡ ಇದ್ದರು. ಅವರು ದೂರವಾಣಿ ಕರೆಯಲ್ಲಿ ಮಾತನಾಡಿದರು. ಕರೆ ಮಾಡಿದವರು ʻನೀವು ಡಿಸಿಎಂ ಆಗುವಿರಾ ಅಥವಾ ಜೈಲಿಗೆ ಹೋಗುವಿರಾ?ʼ ಎಂದು ಕೇಳಿದರು. ಎಲ್ಲಾ ಶಾಸಕರನ್ನ ವಾಪಸ್‌ ಕರೆದುಕೊಂಡು ಬನ್ನಿ ಎಂದು ತಿಳಿಸಿದರು.

ಆಗ ನಾನು ನನಗೆ ಇಷ್ಟೆಲ್ಲಾ ಸ್ಥಾನ ನೀಡಿರುವ ಪಕ್ಷವನ್ನ ಬಿಡುವುದಿಲ್ಲ. ಪಕ್ಷನಿಷ್ಠೆಗಾಗಿ ಬೇಕಾದರೆ ಜೈಲಿಗೆ ಹೋಗುತ್ತೇನೆ ಎಂದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ರಾಜೀವ್ ಗಾಂಧಿ ಅವರು ನನಗೆ ಟಿಕೆಟ್ ನೀಡಿ, ಮಂತ್ರಿ ಮಾಡಿದ್ದರು. ಬಂಗಾರಪ್ಪ ಅವರು ನನಗೆ ಸಹಕಾರ ನೀಡಿದ್ದರು. ಈ ಪಕ್ಷದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಜೈಲು ಆಯ್ಕೆ ಮಾಡಿಕೊಂಡೆ. ಅಂದು ನಾನು ಬೇರೆ ಆಯ್ಕೆ ಮಾಡಿದ್ದರೆ ಏನೇನು ಆಗುತ್ತಾ ಇತ್ತೋ ಗೊತ್ತಿಲ್ಲ ಎಂದರು. 

Must Read