January21, 2026
Wednesday, January 21, 2026
spot_img

ಪುಟ್ಟ ಮಗಳ ಕೈಯಲ್ಲಿ ರೋಗಿಯ ತಲೆಬುರುಡೆಗೆ ತೂತು ಕೊರೆಸಿದ ಡಾಕ್ಟರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ರೋಗಿಯೊಬ್ಬರ ತಲೆಬುರುಡೆಯಲ್ಲಿ ಚಿಕ್ಕ ರಂಧ್ರ ಮಾಡಲು ತನ್ನ 12 ವರ್ಷದ ಮಗಳಿಗೆ ಅವಕಾಶ ನೀಡಿದ್ದಾರೆ. ಇದೀಗ ಈ ವೈದ್ಯರನ್ನು ಬಂಧಿಸಲಾಗಿದ್ದು, ವಿಚಾರಣೆ ಕೂಡ ನಡೆಸಲಾಗುತ್ತಿದೆ.

ಆಸ್ಟ್ರಿಯಾದಲ್ಲಿ ಮೆದುಳಿನ ಶಸ್ತ್ರಚಿಕಿತ್ಸಕಿರೊಬ್ಬರು ತನ್ನ 12 ವರ್ಷದ ಮಗಳಿಗೆ ಆಪರೇಷನ್ ಥಿಯೇಟರ್‌ಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ನಂತರ ರೋಗಿಯ ತಲೆಬುರುಡೆಯಲ್ಲಿ ರಂಧ್ರ ಮಾಡಲು ಅವಕಾಶ ನೀಡಿದ್ದಾರೆ ಎಂದು ಹೇಳಲಾಗಿದೆ. ಕುರಿಯರ್ ವರದಿಯ ಪ್ರಕಾರ, ಆಸ್ಟ್ರಿಯಾದ ಗ್ರಾಜ್‌ನಲ್ಲಿರುವ ಗ್ರಾಜ್ ಪ್ರಾದೇಶಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಈ ಘಟನೆ ನಡೆದಿದೆ .

33 ವರ್ಷದ ಕೃಷಿಕರೊಬ್ಬರು ಮೆದುಳಿನ ಶಸ್ತ್ರಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದರು, ಗಂಭೀರ ಅಪಘಾತದಿಂದ ಅವರ ಮೆದುಳಿಗೆ ಪೆಟ್ಟಾಗಿತ್ತು. ಇವರಿಗೆ ಇಬ್ಬರು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು, ಇದರಲ್ಲಿ ಒಬ್ಬರು ಇನ್ನೂ ತರಬೇತಿಯಲ್ಲಿರುವ ನರಶಸ್ತ್ರಚಿಕಿತ್ಸಕರಾಗಿದ್ದರು. ಈ ವೇಳೆ ಹಿರಿಯ ವೈದ್ಯರು ತಮ್ಮ 12 ವರ್ಷದ ಮಗಳನ್ನು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದಾರೆ. ಶಸ್ತ್ರಚಿಕಿತ್ಸೆ ಬಹುತೇಕ ಪೂರ್ಣಗೊಂಡ ನಂತರ ಮಗಳಿಗೆ ರೋಗಿಯ ತಲೆಬುರುಡೆಯಲ್ಲಿ ಚಿಕ್ಕ ರಂಧ್ರ ಮಾಡಲು ಅವಕಾಶ ನೀಡಿದ್ದಾರೆ. ಆಪರೇಷನ್ ಥಿಯೇಟರ್​​ನಿಂದ ಹೊರ ಬಂದ ಮೇಲೆ ಆಸ್ಪತ್ರೆಗಳ ನರ್ಸ್​​ಗಳಲ್ಲಿ ನನ್ನ ಮಗಳು ಒಂದು ಆಪರೇಷನ್ ಮಾಡಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇದೀಗ ಈ ಹೆಮ್ಮೆ ಪಡುವ ಕೆಲಸವೇ ಆ ವೈದ್ಯರಿಗೆ ಜೈಲು ಸೇರುವ ಸ್ಥಿತಿಯನ್ನು ತಂದಿದೆ. 

Must Read