ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜೀವಕ್ಕೆ ಅಪಾಯಕಾರಿಯಾದ ಅನೇಕ ಕಣಜಗಳ ಕುಟುಕಿಗೆ ಗುರಿಯಾಗಿ ಕಿಡ್ನಿ ವೈಫಲ್ಯದ ಅಪಾಯದಲ್ಲಿದ್ದ 10 ವರ್ಷದ ಬಾಲಕನಿಗೆ ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರು ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿಶ್ವಾಸ್ ( ಹೆಸರು ಬದಲಾಯಿಸಲಾಗಿದೆ) ಎಂಬ ಬಾಲಕ ಆಸ್ಪತ್ರೆಗೆ ಬಂದಾಗ 5 ರಿಂದ 8 ಹಳದಿ ಕಣಜದ ಕುಟುಕಿನಿಂದ ತೀವ್ರ ಸೋಂಕಿಗೆ ಗುರಿಯಾಗಿದ್ದು ಕಿಡ್ನಿ ವೈಫಲ್ಯದ ಆರಂಭಿಕ ಲಕ್ಷಣಗಳು ಗೋಚರಿಸಿದ್ದವು. ತಕ್ಷಣ ಚಿಕಿತ್ಸೆ ಆರಂಭಿಸಿದ ಆಸ್ಪತ್ರೆಯ ಕನ್ಸಲ್ಟೆಂಟ್ ಪಿಡಿಯಾಟ್ರಿಕ್ ಇನ್‌ಟೆನ್ಸಿವಿಸ್ಟ್ ಡಾ. ಸ್ವಾತಿ ರಾವ್, ನೆಫ್ರೊಲಾಜಿಸ್ಟ್‌ಗಳಾದ ಡಾ. ಮಯೂರ್ ಪ್ರಭು ಮತ್ತು ಡಾ. ದುಷ್ಯಂತ್, ಕಾರ್ಡಿಯಾಲಾಜಿಸ್ಟ್ ಡಾ. ರಾಜೇಶ್ ಭಟ್ ಮತ್ತವರ ತಂಡ ಬಾಲಕನ ಜೀವ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಕುರಿತು ಮಾತನಾಡಿದ ಡಾ. ಸ್ವಾತಿ ರಾವ್, ಮಕ್ಕಳಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಬಹು ಕಣಜ ( ಪಿಲಿಕುಡೋಲು) ಕುಟುಕಿಗೆ ಗುರಿಯಾದಾಗ ಹೇಗೆ ವಿವಿಧ (ಮಲ್ಟಿ ಸ್ಪೆಷಾಲಿಟಿ) ತಜ್ಞರ ಚಿಕಿತ್ಸೆಯು ರೋಗಿಯ ಜೀವ ಉಳಿಸುವಲ್ಲಿ ಮುಖ್ಯವಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆತಂದಾಗ ದೇಹದಲ್ಲಿ ವಿಷ ಹರಡಿರುವುದು ಪತ್ತೆಯಾಗಿತ್ತು. ಜೊತೆಗೆ ಏರಿದ ಎದೆ ಬಡಿತ, ಕೈ ಕಾಲು ತಣ್ಣಗಾಗುವುದು (ಕೋಲ್ಡ್ ಎಕ್ಸ್‌ಟ್ರಿಮಿಟಿಸ್), ಉಸಿರಾಟದಲ್ಲಿ ಸಮಸ್ಯೆ, ಊತ ( ಜನರಲೈಸ್ಡ್ ಎಡಿಮಾ) ಲಕ್ಷಣಗಳು ಕಂಡು ಬಂದಿದ್ದವು. ಜೊತೆಗೆ ಮೂತ್ರ ಕೂಡ ಕೆಂಪು ಬಣ್ಣಕ್ಕೆ ತಿರುಗಿದ್ದು ಕಿಡ್ನಿ ಕಾರ್ಯದ ಮೇಲೆ ಪರಿಣಾಮ ಬೀರಿರುವುದು ಖಚಿತವಾಗಿತ್ತು. ಹೀಗಾಗಿ ತಕ್ಷಣ ಬಾಲಕನಿಗೆ ಡಿಟಾಕ್ಸಿಫಿಕೇಶನ್( ವಿಷ ಹೊರತೆಗೆಯುವ ಕಾರ್ಯ) ಮತ್ತು ಅಂಗಾಗ ರಕ್ಷಣೆ ಥೆರಪಿ ಆರಂಭಿಸಲಾಯಿತು ಈ ಮೂಲಕ ಬಹು ಅಂಗಾಗ ವೈಫಲ್ಯವಾಗದಂತೆ ತಡೆಯಲಾಯಿತು. ಕಡಜದ ಕುಟುಕಿನಲ್ಲಿ ಎನ್‌ಜೈಮ್ಸ್(ಕಿಣ್ವ) ಮತ್ತು ಜೈವಿಕ ಅಮೈನ್‌ಗಳ ಮಿಶ್ರಣವಿರುತ್ತದೆ.ಇವು ಕೆಂಪು ರಕ್ತ ಕಣಗಳ ಹಾನಿ, ಸ್ನಾಯು ಹಾನಿ, ಉರಿ ಊತ, ಮತ್ತು ಮುಖ್ಯ ಅಂಗಾಗಗಳ ಕಾರ್ಯದ ಮೇಲೆ ಪರಿಣಾಮ ಬೀರುವಲ್ಲಿ ಶಕ್ತವಾಗಿರುತ್ತವೆ. ಹಳದಿ ಕಣಜಗಳು ಗುಂಪಿನಲ್ಲಿ ದಾಳಿ ನಡೆಸುವುದರಿಂದ ದೇಹದ ರೋಗ ನಿರೋಧಕ ಶಕ್ತಿಯನ್ನೇ ಸೋಲಿಸುವಷ್ಟು ವಿಷವನ್ನು ದೇಹಕ್ಕೆ ಸೇರಿಸುತ್ತವೆ. ಹೀಗಾಗಿ ಇವು ಬಹಳ ಅಪಾಯಕಾರಿ ಎಂದರು.
ಕಣಜ ಕುಟುಕುವುದು ವಿಶೇಷವಾಗಿ ಮಕ್ಕಳಲ್ಲಿ ಎಷ್ಟು ಅಪಾಯಕಾರಿ ಪರಿಣಾಮ ಬೀರುತ್ತವೆಂದು ಈ ಪ್ರಕರಣಗಳು ಒತ್ತಿ ಹೇಳುತ್ತವೆ. ಈ ಲಕ್ಷಣಗಳ ಆರಂಭಿಕ ಗುರುತಿಸುವಿಕೆ ಮತ್ತು ತ್ವರಿತ ಚಿಕಿತ್ಸೆಯು ಸಾವಿನಿಂದ ರಕ್ಷಿಸಬಹುದು. ಗ್ರಾಮೀಣ ಪ್ರದೇಶಗಳಲ್ಲಿನ ಪೋಷಕರು ಮತ್ತು ಆರೈಕೆದಾರರು ಕೀಟದ ಕುಟುಕುಗಳನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸುವಂತೆ ನಾವು ವಿನಂತಿಸುತ್ತೇವೆ. ತೀವ್ರ ತೊಡಕುಗಳಿಗೆ ತಡೆ ಮತ್ತು ಯುವ ಜೀವಗಳನ್ನು ಉಳಿಸಲು ತ್ವರಿತ ವೈದ್ಯಕೀಯ ಗಮನ, ಅರಿವು ಮತ್ತು ಆರಂಭಿಕ ಚಿಕಿತ್ಸೆಯು ನಿರ್ಣಾಯಕವಾಗಿದೆ. ಪ್ರಾಥಮಿಕ ಆರೈಕೆ ಆಸ್ಪತ್ರೆಯಲ್ಲಿ ಸಕಾಲಿಕ ಸ್ಥಿರೀಕರಣ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುವುದರಿಂದ
ಜೀವವನ್ನು ಉಳಿಸಬಹುದು ಎಂದು ಕೆಎಂಸಿ ಆಸ್ಪತ್ರೆಯ ಮಂಗಳೂರು ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಘೀರ್ ಸಿದ್ಧಿಕಿ ಹೇಳಿದರು.

