Monday, November 10, 2025

ಹೊಯ್ಗೆ ಬಜಾರ್-ಕೂಳೂರು ಸೇತುವೆ ನಡುವೆ ಜಲಮಾರ್ಗ: ಎನ್‌ಇಸಿಎಫ್ ತೀವ್ರ ಆಕ್ಷೇಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಡಲತಡಿ ಮಂಗಳೂರು ನಗರದ ಹೊಯ್ಗೆ ಬಜಾರ್‌ನಿಂದ ಕೂಳೂರು ಸೇತುವೆ ತನಕದ ಪ್ರಸ್ತಾವಿತ ಒಳನಾಡು ಜಲಮಾರ್ಗ ಯೋಜನೆಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ತನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ಸಂಪೂರ್ಣ ಅವೈಜ್ಞಾನಿಕ ಹಾಗೂ ಪರಿಸರ ಮಾರಕ ಯೋಜನೆ ಎಂದು ಹೇಳಿದೆ.

ಯೋಜನೆಯ ಬಗ್ಗೆ ಗುರುವಾರ ಮಂಗಳೂರಿನ ಹಳೆ ಬಂದರಿನಲ್ಲಿ ಸಾರ್ವಜನಿಕ ಅಹವಾಲು ಆಲಿಕೆ ನಡೆದಿದ್ದು, ಈ ಸಂದರ್ಭ ಎನ್‌ಇಸಿಎಫ್‌ನ ಗೌರವ ಕಾರ್ಯದರ್ಶಿ ಶಶಿಧರ ಶೆಟ್ಟಿ, ಯೋಜನೆಯಿಂದಾಗುವ ಹಾನಿಗಳನ್ನು ಬೊಟ್ಟು ಮಾಡಿದ್ದಾರೆ.

ಎಸ್‌ಇಸಿಎಫ್ ಆಕ್ಷೇಪಗಳೇನು?

1. ಭೂಮಿ ಸಮೀಕ್ಷೆಯ ಕೊರತೆ:
ಬಂದರು ಇಲಾಖೆ ಮತ್ತು ಕರ್ನಾಟಕ ಕರಾವಳಿ ಮಂಡಳಿ ಈವರೆಗೂ ಬಂದರು ಜಮೀನುಗಳ ಸಮರ್ಪಕ ಸರ್ವೆ ಮತ್ತು ಗಡಿ ಗುರುತಿಸುವಿಕೆ ಮಾಡಿಲ್ಲ. ಒತ್ತುವರಿಯನ್ನು ತೆರವುಗೊಳಿಸುವ ಮೊದಲು ಹೊಸ ಯೋಜನೆ ಕೈಗೆತ್ತಿಕೊಳ್ಳುವುದು ಸರಿಯಲ್ಲ.
2. ಸಿಆರ್‌ಝೆಡ್, ಪರಿಸರ ನಿಯಮಗಳ ಉಲ್ಲಂಘನೆ:
ಪ್ರಸ್ತಾವಿತ ಪ್ರದೇಶವು ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿ ಪಡೆಯಬೇಕಾದ ಕೇಂದ್ರದ ಅನುಮತಿಯನ್ನು ಕೂಡಾ ಈ ಯೋಜನೆಗೆ ಪಡೆದಿಲ್ಲ.
3. ಅಕ್ರಮ ಟೆಂಡರ್
ಪರಿಸರ ಇಲಾಖೆಯ ಅನುಮತಿ ಪಡೆಯುವ ಮುನ್ನವೇ ಯೋಜನೆಗೆ ಟೆಂಡರ್ ಕರೆದಿರುವುದು ಗಂಭೀರ ಕಾನೂನು ಉಲ್ಲಂಘನೆಯಾಗಿದೆ.
4. ಪಾರದರ್ಶಕತೆ ಇಲ್ಲ
ಯೋಜನಾ ಪ್ರಸ್ತಾವನೆಯು ಕೇಂದ್ರದ ಱಪರಿವೇಶ್‌ೞ ಪೋರ್ಟಲ್‌ನಲ್ಲಿ ಲಭ್ಯವಿಲ್ಲ. ಇದರಿಂದ ಅನುಮತಿ ಪ್ರಕ್ರಿಯೆಯ ಪಾರದರ್ಶಕತೆ ಬಗ್ಗೆ ಸಂಶಯ ಮೂಡಿದೆ.
5. ಮ್ಯಾಂಗ್ರೋವ್ಸ್ ನಾಶ, ನದಿ ಒತ್ತುವರಿ ಅಪಾಯ
ಹೂಳೆತ್ತುವುದು, ಮರಳು ತುಂಬುವುದು ಮತ್ತು ನಿರ್ಮಾಣ ಕಾರ್ಯಗಳಿಂದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಹಲವು ಮ್ಯಾಂಗ್ರೋವ್ ಸಸ್ಯಗಳು ಮತ್ತು ಮರಗಳು ನಾಶವಾಗುವ ಅಪಾಯವಿದೆ. ಇದು ಪರಿಸರದ ಮೇಲೆ ಶಾಶ್ವತ ಮತ್ತು ದುಷ್ಪರಿಣಾಮ ಬೀರಲಿದೆ.

ಈ ಅಂಶಗಳಲ್ಲದೆ ಯೋಜನೆಯಿಂದ ಸ್ಟೇಟ್‌ಬ್ಯಾಂಕ್ ಹಾಗೂ ಬಂದರು ನಡುವಿನ ವಾಹನ ದಟ್ಟಣೆ ಕಡಿಮೆಯಾಗುತ್ತದೆ ಎಂಬ ಅಧಿಕಾರಿಗಳ ವಾದ ಸಂಪೂರ್ಣ ಆಧಾರರಹಿತ. ರಸ್ತೆ ಮೂಲಕ 25 ನಿಮಿಷಗಳಲ್ಲಿ ತಲುಪಬಹುದಾದ ದೂರವನ್ನು ಬರೋಬ್ಬರಿ 29 ಕೋಟಿ ರೂ.ಗಳ ಯೋಜನೆ ಬಳಸಿಕೊಂಡು ಬೋಟ್, ಸರಕು ಸಾಗಾಟ ಬೋಟ್‌ಗಳ ಸಂಚಾರ ವ್ಯವಸ್ಥೆ ಮಾಡುವುದರಿಂದ ಯಾವುದೇ ಹೆಚ್ಚಿನ ಅನುಕೂಲವಾಗದು. ಯೋಜನೆಯಲ್ಲಿ ದೊಡ್ಡ ಪ್ರಮಾಣದ ಹೂಳೆತ್ತುವಿಕೆ ಸಂಚಾರ ಸುಧಾರಣೆಯ ನೆಪದಲ್ಲಿ ಮರಳು ಮಾಫಿಯಾಗೆ ಅನುಕೂಲ ಮಾಡಿಕೊಡುವಂತಿದೆ ಎಂದು ಶಶಿಧರ್ ಶೆಟ್ಟಿ ಹೇಳಿದ್ದಾರೆ.

ಈ ಯೋಜನೆ, ಬಳಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿ ಕೆಲವೇ ತಿಂಗಳುಗಳಲ್ಲಿ ಸ್ಥಗಿತಗೊಂಡರೆ ಕೋಟಿಗಟ್ಟಲೆ ಸಾರ್ವಜನಿಕ ಹಣ ಕೂಡಾ ವ್ಯರ್ಥವಾಗುತ್ತದೆ ಎಂದು ಎಚ್ಚರಿಸಿರುವ ಅವರು, ಬಂದರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಇಂತಹಾ ಯೋಜನೆಗಳ ಬದಲು ಬಂದರು ಪ್ರದೇಶದಲ್ಲಿನ ಅಡಿಕೆ, ಮೆಣಸು, ಕೊಬ್ಬರಿ ಗೋದಾಮುಗಳನ್ನು ಶೇ. 90ರಷ್ಟು ಖಾಲಿಯಿರುವ ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸುವ ಕಾರ್ಯ ನಡೆಯಲಿ ಎಂದು ಸಲಹೆ ನೀಡಿದ್ದಾರೆ.

ಇನ್ನು ಈ ಸಾರ್ವಜನಿಕ ಅಹವಾಲು ಆಲಿಕೆಗೆ ಸ್ಥಳೀಯರು, ಮೀನುಗಾರರು ಮತ್ತು ಸಂಬಂಧಪಟ್ಟ ಸ್ಥಳಗಳ ನಿವಾಸಿಗಳಿಗೆ ಸರಿಯಾದ ಮಾಹಿತಿ, ನೋಟಿಸ್ ನೀಡಲಾಗಿಲ್ಲ. ಸಭೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲದ ಕಾರಣ ಕಳಪೆ ಹಾಜರಾತಿ ಕಂಡುಬಂದಿದೆ. ಹಾಗಾಗಿ, ಈ ಆಲಿಕೆಯನ್ನು ಅಮಾನ್ಯ ಎಂದು ಘೋಷಿಸಿ, ನಿಯಮಾನುಸಾರ ಹೊಸ ಆಲಿಕೆಯನ್ನು ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದರ ಜೊತೆಗೆ ಎನ್‌ಇಸಿಎಫ್ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅದು ಹೀಗಿದೆ…
1. ಪರಿಸರ ಮತ್ತು ಸಿಆರ್‌ಝೆಡ್ ಅನುಮತಿಗಳು ದೊರೆಯುವವರೆಗೆ ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆ ತಕ್ಷಣವೇ ಸ್ಥಗಿತಗೊಳಿಸಬೇಕು.
2. ಸಾರ್ವಜನಿಕ ಅಹವಾಲು ಆಲಿಕೆಯನ್ನು ಅಮಾನ್ಯವೆಂದು ಘೋಷಿಸಿ, ಹೊಸ ಅಹವಾಲು ಆಲಿಕೆಯನ್ನು ಕರೆಯಬೇಕು.
3. ಯಾವುದೇ ಮುಂದಿನ ಹೆಜ್ಜೆಗೂ ಮೊದಲು ಬಂದರು ಇಲಾಖೆಯು ಸಮಗ್ರ ಭೂಮಿ ಮತ್ತು ಪರಿಸರ ಸಮೀಕ್ಷೆ ನಡೆಸಲು ನಿರ್ದೇಶಿಸಬೇಕು.
4. ತಮ್ಮ ಈ ಪ್ರಬಲ ಆಕ್ಷೇಪಣೆಯನ್ನು ಕೂಡಲೇ ಸಭೆಯ ನಡಾವಳಿಗಳಲ್ಲಿ ದಾಖಲಿಸಬೇಕು ಮತ್ತು ಯೋಜನೆಯ ಕುರಿತು ನಿರ್ಧಾರ ಕೈಗೊಳ್ಳುವಾಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು.

error: Content is protected !!