ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಮೀಪದ ಹೆಡಿಯಾಲ ವ್ಯಾಪ್ತಿಯ ಬಡಗಲಪುರ ಗ್ರಾಮದಲ್ಲಿ ಮಂಗಳವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಹೊಲದಲ್ಲಿ ಎಂದಿನಂತೆ ಹತ್ತಿ ಬಿಡಿಸುತ್ತಿದ್ದ ಮಹದೇವ (34) ಎಂಬ ಯುವ ರೈತನ ಮೇಲೆ ನರಭಕ್ಷಕ ಹುಲಿ ಮಾರಣಾಂತಿಕ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಈ ಭೀಕರ ದಾಳಿಯಿಂದಾಗಿ ಮಹದೇವ್ ಮೃತಪಟ್ಟಿದ್ದು, ಹುಲಿಯು ಆತನ ದೇಹವನ್ನು ಕಾಡಿನತ್ತ ಎಳೆದುಕೊಂಡು ಹೋಗಲು ಯತ್ನಿಸಿದೆ. ಈ ವೇಳೆ ಜಮೀನಿನ ಬಳಿ ಇದ್ದ ಗ್ರಾಮಸ್ಥರು, ಇತರ ರೈತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜೋರಾಗಿ ಕೂಗಾಡಿ ಆತಂಕ ಸೃಷ್ಟಿಸಿದರು. ಸಾರ್ವಜನಿಕರ ಭಾರೀ ಗದ್ದಲದಿಂದ ಹೆದರಿದ ಬೃಹತ್ ಗಾತ್ರದ ಹುಲಿ, ರೈತನ ದೇಹವನ್ನು ಅಲ್ಲೇ ಬಿಟ್ಟು ಕಾಡಿನೊಳಗೆ ಓಡಿಹೋಗಿದೆ.
ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಸಾವಿಗೆ ಕಾರಣ?
ಈ ಘಟನೆಯಿಂದ ಬಡಗಲಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಕಳೆದ ಎರಡು ತಿಂಗಳಿನಿಂದಲೂ ಗ್ರಾಮದ ಸುತ್ತಮುತ್ತ ನರಭಕ್ಷಕ ಹುಲಿಯ ಓಡಾಟದ ಬಗ್ಗೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಆದರೆ, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಮತ್ತು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಪಾದಿಸಿದ್ದಾರೆ.
“ರೈತ ಮಹದೇವ ಅವರ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ನೇರ ಹೊಣೆ” ಎಂದು ಆರೋಪಿಸಿರುವ ಗ್ರಾಮಸ್ಥರು, ತಮ್ಮ ತಾಳ್ಮೆ ಕಳೆದುಕೊಂಡಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿಯ ಭೀತಿಯಿಂದಾಗಿ ರೈತರು ಮತ್ತು ಗ್ರಾಮಸ್ಥರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.
ಹುಲಿ ಸೆರೆಗೆ ಕೂಂಬಿಂಗ್ ಪ್ರಾರಂಭ
ಗ್ರಾಮಸ್ಥರ ಆಕ್ರೋಶದ ಹಿನ್ನೆಲೆಯಲ್ಲಿ ಮತ್ತು ಜನರ ಸುರಕ್ಷತೆ ದೃಷ್ಟಿಯಿಂದ, ಇದೀಗ ಅರಣ್ಯ ಇಲಾಖೆಯು ಅಂತಿಮವಾಗಿ ಕಾರ್ಯಪ್ರವೃತ್ತವಾಗಿದೆ. ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ತಕ್ಷಣವೇ ಕಾರ್ಯಾಚರಣೆಯನ್ನು ಆರಂಭಿಸಲಾಗಿದ್ದು, ಹುಲಿಯ ಸುಳಿವು ಪತ್ತೆಹಚ್ಚಲು ಎರಡು ಆನೆಗಳ ಮೂಲಕ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.

