ಆರೋಗ್ಯಕರ ಹಾಗೂ ರುಚಿಕರವಾದ ಆಹಾರ ಬೇಕಾದರೆ ಪಾಲಕ್ ರೈಸ್ ಅತ್ಯುತ್ತಮ ಆಯ್ಕೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್, ಕಬ್ಬಿಣ ಹಾಗೂ ಖನಿಜಾಂಶಗಳು ಹೇರಳವಾಗಿರುವುದರಿಂದ ದೈನಂದಿನ ಆಹಾರದಲ್ಲಿ ಇದರ ಸೇರ್ಪಡೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ವಿಶೇಷವಾಗಿ ಮಕ್ಕಳ ಆರೋಗ್ಯಕ್ಕಾಗಿ ಪಾಲಕ್ ರೈಸ್ ಅತ್ಯುತ್ತಮ.
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಕಪ್
ಪಾಲಾಕ್ ಸೊಪ್ಪು – ಸ್ವಲ್ಪ
ಈರುಳ್ಳಿ – 1
ಹಸಿ ಮೆಣಸಿನಕಾಯಿ – 2
ಕರಿಮೆಣಸು – ಸ್ವಲ್ಪ
ಸಾಸಿವೆ – 1 ಚಮಚ
ಜೀರಿಗೆ – 1 ಚಮಚ
ಲವಂಗ – 2
ಗೋಡಂಬಿ – ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಅಡುಗೆ ಎಣ್ಣೆ – ಅರ್ಧ ಕಪ್
ನಿಂಬೆಹಣ್ಣು – 1
ಮಾಡುವ ವಿಧಾನ:
ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಜೀರಿಗೆ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
ಅದಕ್ಕೆ ಪಾಲಾಕ್ ಸೊಪ್ಪನ್ನು ಹಾಕಿ ಸ್ವಲ್ಪ ಕಾಲ ಹುರಿಯಿರಿ. ನಂತರ ಅರ್ಧ ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ.
ಲವಂಗ, ಚಕ್ಕೆ, ಕರಿಮೆಣಸು ಹಾಗೂ ಗೋಡಂಬಿಯನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಈಗ ರುಬ್ಬಿದ ಮಿಶ್ರಣವನ್ನು ಪಾಲಾಕ್ ಮಿಶ್ರಣದೊಂದಿಗೆ ಸೇರಿಸಿ ಬೇಯಿಸಿದ ಅನ್ನವನ್ನು ಹಾಕಿ ಚೆನ್ನಾಗಿ ಕಲಸಿ.
ಕೊನೆಗೆ ಉಪ್ಪು ಹಾಗೂ ನಿಂಬೆ ರಸವನ್ನು ಸೇರಿಸಿ ಮಿಶ್ರಣ ಮಾಡಿದರೆ ಪೌಷ್ಟಿಕ ಮತ್ತು ರುಚಿಯಾದ ಪಾಲಾಕ್ ರೈಸ್ ಸವಿಯಲು ಸಿದ್ಧವಾಗುತ್ತದೆ.

