Monday, November 10, 2025

CRIME | ಕಿಡ್ನ್ಯಾಪ್‌ ಆಗಿದ್ದ ಚಿನ್ನದ ವ್ಯಾಪಾರಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಹೊರ ವಲಯದಲ್ಲಿ ಅ.10ರಂದು ಅಪಹರಣವಾಗಿದ್ದ ವರ್ತಕ ಹೊಳಲು ಗ್ರಾಮದ ಮಂಜುನಾಥ ಶೇಜವಾಡಕರ್ (58) ಅವರ ಶವ ಗುರುವಾರ ಸಂಜೆ ಹರವಿ ಬಸಾಪುರ ಬಳಿ ತುಂಗಭದ್ರಾ ನದಿ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿಗಳಾದ ಹೊಳಲು ಗ್ರಾಮದ ಮಲ್ಲಿಕಾರ್ಜುನ ಉಜ್ಜಮ್ಮನವರ (27) ಮತ್ತು ಯೋಗೇಶ ಅಂಗಡಿ (25) ಎಂಬುವವರನ್ನು ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ವಶಕ್ಕೆ ಪಡೆದಿದ್ದು, ಬುಧವಾರ ರಾತ್ರಿ ಆರೋಪಿಗಳನ್ನು ಕರೆ ತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ನದಿಯಲ್ಲಿ ಹುಡುಕಾಡಿದಾಗ ಶವ ದೊರೆತಿದೆ.

ಅಪಹರಣಕಾರರು ಮಂಜುನಾಥ ಶೇಜವಾಡಕರ್ ಅವರ ಕೈ ಕಾಲು ಕಟ್ಟಿ, ಬಾಯಿಗೆ ಪ್ಲಾಸ್ಟರ್ ಹಾಕಿ ಕಾರಿನ ಡಿಕ್ಕಿಯಲ್ಲಿ ಇರಿಸಿ ಇಡೀ ದಿನ ರಾಣೇಬೆನ್ನೂರು ಸುತ್ತಮುತ್ತ ಸುತ್ತಾಡಿಸಿದ್ದರು. ಇದರಿಂದ ಮಂಜುನಾಥ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ನಂತರ ಶವವನ್ನು ಶುಕ್ರವಾರ ರಾತ್ರಿ ಹರವಿ ಸೇತುವೆ ಬಳಿಯ ನದಿಗೆ ಎಸೆದಿದ್ದೇವೆ ಎಂದು ಅಪಹರಣಕಾರರು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ.

ಆರೋಪಿಗಳ ಮಾಹಿತಿ ಆಧಾರದ ಮೇಲೆ ಪೊಲೀಸರು ಮತ್ತು ಅಗ್ನಿ ಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಗುರುವಾರ ಸಂಜೆ ಹರವಿ ಸೇತುವೆ ಬಳಿಯ ಬಸಾಪುರ ಬಳಿ ಶವ ಪತ್ತೆಯಾಗಿದೆ.

error: Content is protected !!