ಹೊಸದಿಗಂತ ವರದಿ ಮಡಿಕೇರಿ:
ಬ್ರಹ್ಮಗಿರಿ ತಪ್ಪಲಿನಲ್ಲಿರುವ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಶುಕ್ರವಾರ ಮಧ್ಯಾಹ್ನ 1.44 ಸಲ್ಲುವ ಮಕರ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಆವೀರ್ಭವಿಸುವ ಮೂಲಕ ನೆರೆದಿದ್ದ ಸಹಸ್ರಾರು ಭಕ್ತರನ್ನು ಪುಳಕಿತರನ್ನಾಗಿಸಿದಳು.
ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ತುಲಾ ಸಂಕ್ರಮಣದಂದು ಮಧ್ಯಾಹ್ನ 1.44ರ ನಿಗದಿತ ಸಮಯಕ್ಕೆ ತಾಯಿ ಕಾವೇರಿ ಆವೀರ್ಭವಿಸುವುದರೊಂದಿಗೆ ಭಕ್ತ ಜನರನ್ನು ಹರಸಿದಳು.
ಈ ಬಾರಿ ಹಗಲು ವೇಳೆಯಲ್ಲಿ ತೀರ್ಥೋದ್ಭವವಾಗುತ್ತಿರುವ ಹಿನ್ನೆಲೆಯಲ್ಲಿ ಈ ಅಪೂರ್ವ ಘಟನೆಯನ್ನು ಕಣ್ತುಂಬಿಕೊಳ್ಳಲು ಬೆಳಗಿನಿಂದಲೇ ತಲಕಾವೇರಿಯತ್ತ ಅಸಂಖ್ಯಾತ ಭಕ್ತಾದಿಗಳು ಆಗಮಿಸುತ್ತಿದ್ದರು. ಭಾಗಮಂಡಲದಲ್ಲಿ ಪಿಂಡಪ್ರದಾನ ಮುಗಿಸಿ ಭಗಂಡೇಶ್ವರ ಸನ್ನಿಧಿಯಲ್ಲಿ ಪೂಜಾ ವಿಧಿಗಳನ್ನು ಪೂರೈಸಿ ತಲಕಾವೇರಿಯತ್ತ ಸಾಗುತ್ತಿದ್ದ ದೃಶ್ಯ ಗೋಚರಿಸಿತು. ಭಕ್ತಾದಿಗಳ ಅನುಕೂಲಕ್ಕಾಗಿ ಭಾಗಮಂಡಲದಿಂದ ತಲಕಾವೇರಿಗೆ 25 ಬಸ್’ಗಳನ್ನು ನಿಯೋಜಿಸಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಅತ್ತ ತಲಕಾವೇರಿ ಕ್ಷೇತ್ರದಲ್ಲಿ ಅರ್ಚಕ ಪ್ರಶಾಂತ ಆಚಾರ್ ನೇತೃತ್ವದಲ್ಲಿ 15ಕ್ಕೂ ಅಧಿಕ ಮಂದಿ ಅರ್ಚಕರಿಂದ ಶುಕ್ರವಾರ ಮುಂಜಾನೆಯಿಂದಲೇ ಮಹಾ ಸಂಕಲ್ಪ, ಕುಂಕುಮಾರ್ಚನೆ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಆರಂಭಗೊಂಡವು.
ಮತ್ತೊಂದಡೆ ಕ್ಷೇತ್ರದಲ್ಲಿ ನಿರ್ಮಿಸಲಾದ ಸಾಂಸ್ಕೃತಿಕ ವೇದಿಕೆಯಲ್ಲಿ ಭಜನೆ, ಭಕ್ತಿಗೀತೆಗಳ ಕಾರ್ಯಕ್ರಮವನ್ನು ಕೊಡವ ಅಕಾಡೆಮಿಯ ಅಧ್ಯಕ್ಷ ಮಹೇಶ್ ನಾಚಯ್ಯ ಉದ್ಘಾಟಿಸಿದರು. ಅರೆಭಾಷೆ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವೊಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್, ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. ಇದೇ ಸಂದರ್ಭ ಕೊಡವ ಸಾಂಪ್ರದಾಯಿಕ ದುಡಿ ಕೊಟ್ಟುಪಾಟ್, ಬಾಳೆಲೆಯ ವತ್ಸಲಾ ನಾರಾಯಣ ಅವರ ಕಾವೇರಿ ಕಲಾ ತಂಡದಿಂದ ಭಜನೆ ಹಾಗೂ ಭಕ್ತಿ ಗೀತೆಗಳ ಕಾರ್ಯಕ್ರಮ ಜರುಗಿತು.
ಮಧ್ಯಾಹ್ನ ಅರ್ಚಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರುತ್ತಿದ್ದಂತೆ, ಅರ್ಚಕರ ಮಂತ್ರಘೋಷ ಹಾಗೂ ನೆರೆದಿದ್ದ ಸಹಸ್ರಾರು ಭಕ್ತ ಜನರ ‘ಜೈ ಜೈ ಮಾತಾ ಕಾವೇರಿ ಮಾತಾ, ಉಕ್ಕಿ ಬಾ ಉಕ್ಕಿ ಬಾ ಕಾವೇರಮ್ಮ ಉಕ್ಕಿ ಬಾ’ ಎಂಬ ಜಯಘೋಷಗಳ ನಡುವೆ ಬ್ರಹ್ಮಕುಂಡಿಕೆಯಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಗೋಚರಿಸುತ್ತಿದ್ದಂತೆ ಕ್ಷೇತ್ರದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಭಾವಪರವಶರಾದರು.
ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಪೊಲೀಸರು ನಿರ್ಮಿಸಿದ್ದ ತಡೆಯನ್ನು ಭೇದಿಸಿ ಭಕ್ತಾದಿಗಳು ತೀರ್ಥಕ್ಕಾಗಿ ಮುಗಿಬಿದ್ದರು.
ತೀರ್ಥೋದ್ಭವವಾಗುತ್ತಿದಂತೆ ಅರ್ಚಕರು ಪವಿತ್ರ ತೀರ್ಥನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಿದರು. ತೀರ್ಥ ಪಡೆದ ಭಕ್ತಜನರು ಪುಳಕಿತರಾದರು.
ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಆವೀರ್ಭವಿಸಿದ ಮಾತೆ ಕಾವೇರಿ, ಕಣ್ತುಂಬಿಕೊಂಡ ಭಕ್ತರು
