ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಕೈಗೆತ್ತಿಕೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಗಣತಿ) ಭಾಗವಹಿಸಲು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾಮೂರ್ತಿ ನಿರಾಕರಿಸಿದ ಪ್ರಕರಣ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ. “ಅದು ಅವರಿಗೆ ಬಿಟ್ಟ ವಿಚಾರ. ಇನ್ಫೋಸಿಸ್ ಅವರು ಬೃಹಸ್ಪತಿಗಳೇ?” ಎಂದು ಪ್ರಶ್ನಿಸಿರುವ ಸಿಎಂ, ಈ ಸಮೀಕ್ಷೆ ಕೇವಲ ಹಿಂದುಳಿದವರ ಸಮೀಕ್ಷೆ ಅಲ್ಲ, ಬದಲಾಗಿ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎಂದಿದ್ದಾರೆ. “ಅವರಿಗೆ ತಪ್ಪು ಮಾಹಿತಿ ಇರಬಹುದು. ಕೇಂದ್ರ ಸರ್ಕಾರದ ಸಮೀಕ್ಷೆಗೆ ಏನು ಉತ್ತರ ಕೊಡುತ್ತಾರೆ ನೋಡೋಣ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್, ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಮೇಲ್ಜಾತಿಯವರಿಗೆ ಹಿಂದುಳಿದ ವರ್ಗಗಳ ಸಮೀಕ್ಷೆ ಬೇಕಾಗಿಲ್ಲ. ಸಿಎಂ ಸಿದ್ದರಾಮಯ್ಯ ಧೈರ್ಯ ಮಾಡಿ ಮಾಡುತ್ತಿದ್ದಾರೆ” ಎಂದಿರುವ ಹರಿಪ್ರಸಾದ್, “ಸಮೀಕ್ಷೆಯಲ್ಲಿ ಭಾಗಿಯಾಗಲ್ಲ ಅಂದರೆ ಅವರು ಸಂವಿಧಾನ ವಿರೋಧಿಗಳು, ದೇಶ ದ್ರೋಹಿಗಳು ಅಂತಾನೇ ಹೇಳಬೇಕಾಗುತ್ತೆ” ಎಂದು ಕಿಡಿಕಾರಿದ್ದಾರೆ.
“ಅವರೆಲ್ಲಾ ತಂತ್ರಜ್ಞಾನ ದಿಗ್ಗಜರು ಅನಿಸಿಕೊಂಡವರು. ಸರ್ಕಾರದಿಂದ ಒಂದು ರೂಪಾಯಿಗೆ ಭೂಮಿ ಪಡೆದುಕೊಂಡಿರುತ್ತಾರೆ. ಸುಮಾರು 35 ಸಾವಿರ ಕೋಟಿ ತೆರಿಗೆ ಕಟ್ಟೋರು ಇದ್ದಾರೆ. ತೆರಿಗೆ ಕಟ್ಟೋದರಿಂದ ತಪ್ಪಿಸಿಕೊಳ್ಳಲು ಭಾಗಿಯಾಗುತ್ತಿಲ್ಲ” ಎಂದು ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.