ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ನಟ ದುಲ್ಖರ್ ಸಲ್ಮಾನ್ ಅವರಿಗೆ ಕೇರಳ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಆಪರೇಷನ್ ನಮ್‌ಖೋರ್ ಹೆಸರಿನಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದ ಲ್ಯಾಂಡ್ ರೋವರ್ ಕಾರನ್ನು ಇದೀಗ ಅವರಿಗೆ ಮರಳಿಸಲು ಸೂಚನೆ ನೀಡಿದೆ. ಕೋರ್ಟ್ ಸೂಚನೆ ಮೇರೆಗೆ ದುಲ್ಖರ್ ಅಗತ್ಯ ದಾಖಲೆಗಳನ್ನು ಕಸ್ಟಮ್ಸ್‌ಗೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಕಾರನ್ನು ಹಿಂದಿರುಗಿಸಲಾಗಿದೆ.
ಬ್ಯಾಂಕ್ ಗ್ಯಾರಂಟಿಯ ಆಧಾರದಲ್ಲಿ ಕಾರನ್ನು ಅಧಿಕಾರಿಗಳು ಮರಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಾಗ್ಯೂ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಕಾರನ್ನು ಕೇರಳದಿಂದ ಹೊರಗೆ ಕೊಂಡೊಯ್ಯವಂತಿಲ್ಲ.
ಈ ಸುದ್ದಿಯನ್ನೂ ಓದಿ: ED Raid: ಭರ್ಜರಿ ಇಡಿ ರೇಡ್! ದೆಹಲಿ ಉದ್ಯಮಿಗೆ ಸೇರಿದ 80 ಕೋಟಿ ರೂ. ವಿದೇಶಿ ಆಸ್ತಿ ವಶಕ್ಕೆ
ಆಪರೇಷನ್ ನಮ್‌ಖೋರ್ ಕಾರ್ಯಾಚರಣೆಯ ಭಾಗವಾಗಿ ಕಸ್ಟಮ್ಸ್ ಅಧಿಕಾರಿಗಳ ತಂಡ ಕೇರಳದ ಸುಮಾರು 30 ಕಡೆಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಒಟ್ಟು 36 ಐಷರಾಮಿ ಕಾರುಗಳನ್ನು ಸೀಝ್ ಮಾಡಲಾಗಿತ್ತು. ಈ ವಾಹನಗಳನ್ನು ಭೂತಾನ್‌ನಿಂದ ಅಕ್ರಮವಾಗಿ ತರಿಸಿಕೊಂಡು ನಕಲಿ ದಾಖಲೆಗಳ ಮೂಲಕ ನೋಂದಾಯಿಸಲಾಗುತ್ತಿದೆ ಎನ್ನುವ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ನಡೆಯುತ್ತಿರುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯದ ಅಧಿಕಾರಿಗಳು ದುಲ್ಖರ್ ಸಲ್ಮಾನ್, ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಸುಕುಮಾರನ್ ಮನೆಗೆ ದಾಳಿ ನಡೆಸಿದ್ದರು. ಏಕಕಾಲದಲ್ಲಿ 17 ಸ್ಥಳಗಳಲ್ಲಿ ಶೋಧ ನಡೆಸಲಾಯಿತು.