Sunday, October 19, 2025

ಕಾರ್ಮಿಕ ಇಲಾಖೆ ಅಧಿಕಾರಿ ಸೋಗಿನಲ್ಲಿ ಹಣ ವಸೂಲಿಗೆ ಯತ್ನ

ಹೊಸ ದಿಗಂತ ವರದಿ,ಮಡಿಕೇರಿ:

ತಾನು ಕಾರ್ಮಿಕ ಇಲಾಖೆಯ ಅಧಿಕಾರಿ‌ ಎಂದು ಹೇಳಿಕೊಂಡ‌ ವ್ಯಕ್ತಿಯೊಬ್ಬ ಉದ್ಯಮಿಯೊಬ್ಬರಿಂದ ಹಣ‌ ವಸೂಲಿಗೆ ಯತ್ನಿಸಿದ ಘಟನೆ ನಡೆದಿದ್ದು, ಈ ಸಂಬಂಧ ಮಡಿಕೇರಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಣಿಕೊಪ್ಪದ ಉದ್ಯಮಿ ಚಂದನ್ ಕಾಮತ್ ಎಂಬವರಿಗೆ ಮೊಬೈಲ್ ಸಂಖ್ಯೆ 8150816922ರಿಂದ ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ವೀರಾಜಪೇಟೆಯ ಕಾರ್ಮಿಕ ಇಲಾಖೆಯಲ್ಲಿ ಸೀನಿಯರ್ ಲೇಬರ್ ಇನ್ಸ್ಪೆಕ್ಟರ್ ಶಿವರಾಜು ಎಂದು ಪರಿಚಯಿಸಿಕೊಂಡು, ತಮ್ಮ ಸಂಸ್ಥೆಯ ಕಾರ್ಮಿಕ ಲೈಸನ್ಸ್’ನ ಬಾಬ್ತು ₹11350ನ್ನು ಈ ಕೂಡಲೇ ಫೋನ್ ಪೇ ಮೂಲಕ ಕಳುಹಿಸಿಕೊಡುವಂತೆ ಕೇಳಿದ್ದಾನೆ.

ಆದರೆ ಚಂದನ್ ಕಾಮತ್ ಅವರು ಫೋನ್ ಪೇ ಮಾಡಲಾಗುವುದಿಲ್ಲ. ತಾನು ವೀರಾಜಪೇಟೆ ಕಚೇರಿಗೆ ಬಂದು ಹಣ ಕಟ್ಟುವುದಾಗಿ ತಿಳಿಸಿ ವೀರಾಜಪೇಟೆಗೆ ತೆರಳಿದ್ದಾರೆ.


ಕಾವೇರಿ ಸಂಕ್ರಮಣದ ಪ್ರಯುಕ್ತ ಕೊಡಗಿನಲ್ಲಿ ಶುಕ್ರವಾರ ಸರಕಾರಿ ರಜೆ ಇದ್ದುದರಿಂದ ಕಾರ್ಮಿಕ ಕಚೇರಿ ಮುಚ್ಚಿದ್ದು, ಶಿವರಾಜು ಎಂಬ ವ್ಯಕ್ತಿಗೆ ಕರೆ ಮಾಡಿದರೆ ಆತ ಸಂಪರ್ಕಕ್ಕೆ ಸಿಗಲಿಲ್ಲ.

ನಂತರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಚಂದನ್ ಅವರು ತಮ್ಮ ಸ್ನೇಹಿತರಾದ ವೀರಾಜಪೇಟೆಯ ಮುರಳಿ ಶೆಣೈ ಹಾಗೂ ಶಬರೀಶ್ ಅವರ ಮೂಲಕ ಕಾರ್ಮಿಕ ಇಲಾಖೆಯ ಅಧಿಕಾರಿ ನವೀನ್ ಅವರನ್ನು ಸಂಪರ್ಕಿಸಿದಾಗ, ಶಿವರಾಜು ಎಂಬ ಯಾವುದೇ ವ್ಯಕ್ತಿ ಇಲಾಖೆಯಲ್ಲಿ ಆ ಹುದ್ದೆಯಲ್ಲಿಲ್ಲ‌ ಎಂಬ ವಿಚಾರ ಬೆಳಕಿಗೆ ಬಂದಿದೆ.

ಈ ವಂಚಕ ಇನ್ನಷ್ಟು ಮಂದಿಗೆ ಇದೇ ರೀತಿ ವಂಚನೆ ಮಾಡಬಹುದೆಂದು ಮನಗಂಡ ಚಂದನ್ ಕಾಮತ್ ಆ ವ್ಯಕ್ತಿಯ ವಿರುದ್ಧ ಮಡಿಕೇರಿಯ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇಂತಹ ನಕಲಿ ಅಧಿಕಾರಿ ಸೋಗಿನಲ್ಲಿ ವಸೂಲಿ ಮಾಡಲು ಪ್ರಯತ್ನಿಸುವ ದುಷ್ಕರ್ಮಿಗಳ ಬಗ್ಗೆ ಎಚ್ಚರ ವಹಿಸಬೇಕು ಮತ್ರು ಸಂಶಯ ಕಂಡು ಬಂದಲ್ಲಿ ದೂರು ನೀಡುವಂತೆ ಕಾರ್ಮಿಕ ಇಲಾಖೆಯವರು ಹಾಗೂ ಸೈಬರ್ ಪೊಲೀಸ್ ಇಲಾಖೆಯವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

error: Content is protected !!