ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್.ಅಶೋಕ್ ಪತ್ರ ಬರೆದು ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸ್ಸಿನ ಅನ್ವಯ ರಾಜ್ಯದಲ್ಲಿ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಕಳಪೆ ಆಹಾರವನ್ನು ಕೂಡಲೇ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
‘ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಸರಬರಾಜು ಆಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವುದಲ್ಲದೆ ಈ ಹಿಂದೆ ಅಂಗನವಾಡಿಗಳಿಗೆ ಒಳ್ಳೆಯ ಆಹಾರ ಪೂರೈಸಲಾಗುತ್ತಿತ್ತು. ಅಲ್ಲದೆ ಇದೀಗ ಪೌಡರ್ ರೂಪದಲ್ಲಿ ಆಹಾರ ಸರಬರಾಜಾಗುತ್ತಿದ್ದು ಅದರಲ್ಲಿ ಪೌಷ್ಟಿಕಾಂಶ ಇದೆಯೋ ಇಲ್ಲವೋ ಗೊತ್ತಿಲ್ಲ. ಔಷಧಿ ರೂಪದಲ್ಲಿ ಆಹಾರ ಕೊಡುತ್ತಿದ್ದಾರೆ. ಗುಣಮಟ್ಟವಿಲ್ಲದ ಅಲ್ಪ ಪ್ರಮಾಣದ ಆಹಾರ ಪೂರೈಸುತ್ತಿರುವುದು ಕಂಡುಬಂದಿದೆ. ಹಾಗಾಗಿ ಮೊದಲು ಏನು ಆಹಾರ ಪೂರೈಸಲಾಗುತ್ತಿತ್ತೋ ಆ ರೀತಿಯ ಆಹಾರವನ್ನು ಈಗಲೂ ಸಹ ಪೂರೈಕೆ ಮಾಡಬೇಕೆಂದು ಸಮಿತಿಯು ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಕರ್ನಾಟಕ ರಾಜ್ಯದ ಬಡಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಯ ದೃಷ್ಟಿಯಿಂದ ಐತಿಹಾಸಿಕವಾದ ಹಾಗೂ ಮಹತ್ವದ ತೀರ್ಮಾನವಾಗಿದೆ.
ಈ ಹಿನ್ನೆಲೆಯಲ್ಲಿ ಸರಬರಾಜು ಮಾಡುತ್ತಿರುವ ಸಂಸ್ಥೆಗೆ ನೀಡಿರುವ ಆದೇಶವನ್ನು ರದ್ದುಪಡಿಸಿ, ಸರ್ಕಾರಿ ಸ್ವಾಮ್ಯದ ಸಹಕಾರಿ ಸಂಸ್ಥೆ ಜನತಾ ಬಜಾರ್ ಮೂಲಕ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಆದೇಶ ನೀಡುವುದು ಎಲ್ಲ ರೀತಿಯಲ್ಲೂ ಉತ್ತಮ ಕ್ರಮ ಆಗುತ್ತದೆ.ಹಾಗಾಗಿ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ-2024-25 ಸಮಿತಿಯ ಶಿಫಾರಸ್ಸಿನ ಅನ್ವಯ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ತಮ್ಮಲ್ಲಿ ಕೋರುತ್ತೇನೆ ‘ ಎಂದು ಅಶೋಕ್ ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.