ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನ್ ನಡುವಿನ ಗಡಿಭಾಗದಲ್ಲಿ ನಡೆದ ವೈಮಾನಿಕ ದಾಳಿಯ ಪರಿಣಾಮವಾಗಿ ಕ್ರೀಡಾಂಗಣಕ್ಕೂ ರಾಜಕೀಯ ಬಿಕ್ಕಟ್ಟು ತಲುಪಿದೆ. ಪಾಕಿಸ್ತಾನ್ ಸೇನೆಯು ಪಕ್ತಿಕಾ ಪ್ರಾಂತ್ಯದ ಉರ್ಗುನ್ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ಮೂವರು ಅಫ್ಘಾನ್ ಸ್ಥಳೀಯ ಕ್ರಿಕೆಟಿಗರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ಪಾಕಿಸ್ತಾನ್ ವಿರುದ್ಧದ ಮುಂಬರುವ ಸರಣಿಯನ್ನು ಬಹಿಷ್ಕರಿಸಲು ನಿರ್ಧರಿಸಿದೆ.
ನವೆಂಬರ್ 17ರಿಂದ ಆರಂಭವಾಗಬೇಕಿದ್ದ ತ್ರಿಕೋನ ಟೂರ್ನಿಯಲ್ಲಿ ಪಾಕಿಸ್ತಾನ್, ಅಫ್ಘಾನಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಬೇಕಿತ್ತು. ಆದರೆ ಈ ದುರ್ಘಟನೆಯ ನಂತರ ಅಫ್ಘಾನಿಸ್ತಾನ್ ತಂಡ ತನ್ನ ಭಾಗವಹಿಸುವಿಕೆಯನ್ನು ಹಿಂಪಡೆಯುವ ಮೂಲಕ ಪಾಕ್ ವಿರುದ್ಧದ ಕ್ರಿಕೆಟ್ ಸಂಬಂಧ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಫ್ಘಾನಿಸ್ತಾನ್ ಕ್ರಿಕೆಟ್ ಬೋರ್ಡ್ ನೀಡಿದ ಹೇಳಿಕೆಯಲ್ಲಿ “ಕ್ರಿಕೆಟ್ ನಮ್ಮ ರಾಷ್ಟ್ರದ ಹೆಮ್ಮೆ. ಆದರೆ ನಮ್ಮ ಕ್ರೀಡಾಪಟುಗಳ ಮೇಲೆ ನಡೆದ ದಾಳಿ ಕ್ಷಮೆಯಿಲ್ಲದ್ದು” ಎಂದು ಸ್ಪಷ್ಟಪಡಿಸಿದೆ.
ಪಾಕ್ ಏರ್‌ಫೋರ್ಸ್ ದಾಳಿಯಿಂದ ಸಾವನ್ನಪ್ಪಿದ ಕಬೀರ್, ಸಿಬ್ಘತುಲ್ಲಾ ಮತ್ತು ಹರೂನ್ ಅಫ್ಘಾನ್ ಸ್ಥಳೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ ಪ್ರತಿಭಾನ್ವಿತ ಆಟಗಾರರಾಗಿದ್ದರು. ಇವರ ಸಾವಿನಿಂದ ಕ್ರೀಡಾ ವಲಯದಲ್ಲಿ ದುಃಖದ ಅಲೆ ಹರಡಿದ್ದು, ದೇಶದಾದ್ಯಂತ ಪಾಕ್ ವಿರುದ್ಧದ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ನಂತರ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ (ಪಿಸಿಬಿ) ತ್ರಿಕೋನ ಸರಣಿಯನ್ನು ಮುಂದುವರಿಸಲು ಪರ್ಯಾಯ ತಂಡವನ್ನು ಕಣಕ್ಕಿಳಿಸುವ ಯತ್ನದಲ್ಲಿದೆ. ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಸರಣಿಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸದಿರಲು ನಿರ್ಧರಿಸಿದ್ದಾರೆ.