ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡುವ ಯತ್ನದಲ್ಲಿ ರೌಡಿಶೀಟರ್ ಓರ್ವ ಸಿಂದಗಿ ತಾಲ್ಲೂಕಿನ ರಾಂಪೂರ ಗ್ರಾಮದ ಹೊರಭಾಗದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.
ಮೃತನನ್ನು ಯುನಸ್ ಪಟೇಲ್ (35) ಎಂದು ಗುರುತಿಸಲಾಗಿದೆ.
ಯುನಸ್ ಪಟೇಲ್ ಅಕ್ಟೋಬರ್ 17 ರಂದು ಗಾಂಧಿ ಚೌಕ್ ಪ್ರದೇಶದಲ್ಲಿ ಒಬ್ಬ ವ್ಯಕ್ತಿಗೆ ಚಾಕು ತೋರಿಸಿ 25 ಸಾವಿರ ರೂ. ದರೋಡೆ ನಡೆಸಿದ. ಬಳಿಕ ಅವರ ಸ್ಕೂಟಿಯನ್ನೂ ಕದ್ದುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೋಲೀಸರ ತಂಡ ಆರೋಪಿ ಯುನಸ್ ಪಟೇಲ್ ಅನ್ನು ಆಲಮೇಲ ತಾಲ್ಲೂಕಿನ ದೇವಣಗಾಂವ್ ಗ್ರಾಮದತ್ತ ಹೋಗುತ್ತಿದ್ದಾಗ ಬಂಧನ ಮಾಡಲು ಮುಂದಾಯಿತು. ಈ ವೇಳೆ ಆರೋಪಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಮುಂದಾಗಿದ್ದ, ಇನ್‌ಸ್ಪೆಕ್ಟರ್ ಪ್ರದೀಪ್ ತಳಕೇರಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರು. ಕೂಡಲೇ ಸಿಂಧಗಿ ತಾಲೂಕು ಆಸ್ಪತ್ರೆಯಲ್ಲಿ ಯುನಸ್ ಪಟೇಲ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವೈದ್ಯರು ಯುನಸ್ ಪಟೇಲ್ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ.
ಯುನಸ್ ಪಟೇಲ್ ಮೇಲೆ ಎರಡು ಕೊಲೆ ಪ್ರಕರಣಗಳು, ಒಂದು ಕೊಲೆ ಯತ್ನ, ಮತ್ತು ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಸದ್ಯ ಈ ಪ್ರಕರಣದ ಸಂಬಂಧ ತನಿಖೆ ತೀವ್ರಗತಿಯಲ್ಲಿ ಮುಂದುವರೆಯುತ್ತಿದೆ.