Monday, October 20, 2025

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ‘ಅಸ್ತು’ ಎಂದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಹೈಕೋರ್ಟ್ ನವೆಂಬರ್ 2ರಂದು ಪಥಸಂಚಲನಕ್ಕೆ ಅವಕಾಶ ನೀಡುವಂತೆ ತೀರ್ಮಾನಿಸಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್, ಅರ್ಜಿದಾರರನ್ನು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ.

ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಈ ಪಥಸಂಚಲನ ಶಕ್ತಿ ಪ್ರದರ್ಶನದ ರೂಪದಲ್ಲಿ ನಡೆಯಲಿತ್ತು. ನಗರದ ಮುಖ್ಯ ರಸ್ತೆಗಳಲ್ಲಿನ ಕೇಸರಿ ಮತ್ತು ಭಗವಾ ಧ್ವಜಗಳು, ಬ್ಯಾನರ್‌ಗಳು ಮತ್ತು ಬಂಟಿಂಗ್‌ಗಳನ್ನು ಪುರಸಭೆಯ ಸಿಬ್ಬಂದಿ ರಾತ್ರೋರಾತ್ರಿ ತೆರವುಗೊಳಿಸಿದ್ದರು. ಈ ಕ್ರಮ ಖಂಡಿಸಿ ಹಿಂದು ಕಾರ್ಯಕರ್ತರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಪಥಸಂಚಲನಕ್ಕೆ ಮೊದಲು ಅನುಮತಿ ನೀಡದಿರಲು ಪ್ರಮುಖ ಕಾರಣಗಳೆಂದರೆ ಲಾಠಿ, ಆಯುಧ ಬಳಕೆಯ ಉಲ್ಲೇಖದ ಅಭಾವ, ಕಾರ್ಯಕ್ರಮದಲ್ಲಿ ಎಷ್ಟು ಜನ ಭಾಗವಹಿಸುವುದೆಂಬ ಅಸ್ಪಷ್ಟ ಮಾಹಿತಿ, ಸಂಘದ ನೋಂದಣಿ ಪ್ರಮಾಣಪತ್ರದ ಪ್ರತಿಯಿಲ್ಲದಿರುವುದು ಸೇರಿದಂತೆ ಒಟ್ಟು 11 ಅಂಶಗಳಿವೆ.

ಅರ್ಜಿದಾರರ ಪರ ವಕೀಲರು, ಅಕ್ಟೋಬರ್ 13ರಂದು ಪೊಲೀಸರಿಗೆ ಭದ್ರತೆ ನೀಡಲು ಮಾಹಿತಿ ನೀಡಲಾಗಿತ್ತು ಮತ್ತು ಅಕ್ಟೋಬರ್ 17ರಂದು ಕಾರ್ಯನಿರ್ವಹಣಾ ಮ್ಯಾಜಿಸ್ಟ್ರೇಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಆದ್ರೆ ನಿನ್ನೆ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ವಾದಿಸಿದರು.

error: Content is protected !!