Monday, October 20, 2025

ರಾಮನಗರಿ ಅಯೋಧ್ಯೆ ಅದ್ದೂರಿ ದೀಪೋತ್ಸವಕ್ಕೆ ಸಜ್ಜು: ಇತ್ತ ನಾಲಗೆ ಹರಿಯಬಿಟ್ಟ ಅಖಿಲೇಶ್‌ ಯಾದವ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಇಡೀ ದೇಶವೇ ದೀಪಾವಳಿ ಆಚರಣೆಗೆ ಸಜ್ಜಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದೆ.

ಆದ್ರೆ ಇತ್ತ ಇದರ ವಿರುದ್ಧ ಸಮಾಜವಾದಿ ಪಾರ್ಟಿಯ (SP) ಮುಖಂಡ ಅಖಿಲೇಶ್‌ ಯಾದವ್‌ ನೀಡಿದ ಹೇಳಿಕೆ ಹಿಂದುಗಳ, ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.

ದೀಪಗಳು ಮತ್ತು ಮೇಣದ ಬತ್ತಿಗಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಖರ್ಚು ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅಖಿಲೇಶ್‌ ಯಾದವ್‌, ʼನಾವು ದೀಪಗಳು ಮತ್ತು ಮೇಣದ ಬತ್ತಿಗಳಿಗಾಗಿ ಹಣವನ್ನು ಏಕೆ ಖರ್ಚು ಮಾಡಬೇಕು? ಅದರ ಬಗ್ಗೆ ಯಾಕೆ ಇಷ್ಟು ಯೋಚಿಸಬೇಕು?ʼ ಎಂದು ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಕ್ರಿಸ್ಮಸ್‌ ಆಚರಣೆಯನ್ನು ನೋಡಿ ನಾವು ಕಲಿಯಬೇಕು ಎಂದು ಹೇಳಿದ್ದಾರೆ.

ಇಡೀ ಜಗತ್ತಿನಲ್ಲಿ, ಕ್ರಿಸ್ಮಸ್ ಸಮಯದಲ್ಲಿ ಎಲ್ಲ ನಗರಗಳು ಬೆಳಗುತ್ತವೆ. ಅದು ತಿಂಗಳುಗಟ್ಟಲೆ ಮುಂದುವರಿಯುತ್ತದೆ. ನಾವು ಅವರಿಂದ ಕಲಿಯಬೇಕು ಎಂಬ ಅಖಿಲೇಶ್‌ ಯಾದವ್‌ ಹೇಳಿಕೆ ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದೆ.

‘ಭಗವಂತ ಶ್ರೀರಾಮನ ಹೆಸರಿನಲ್ಲಿ ನಾನೊಂದು ಸಲಹೆ ನೀಡಲು ಬಯಸುತ್ತೇನೆ. ಕ್ರಿಸ್‌ಮಸ್‌ ಸಮಯದಲ್ಲಿ ಎಲ್ಲ ನಗರಗಳು ಬೆಳಗುತ್ತವೆ ಮತ್ತು ಅದು ತಿಂಗಳ ಕಾಲ ಹಾಗೇ ಇರುತ್ತದೆ. ಅವರಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ. ಹಣತೆ ಮತ್ತು ಕ್ಯಾಂಡಲ್‌ಗಾಗಿ ನಾವು ಹಣವನ್ನು ಯಾಕೆ ಖರ್ಚು ಮಾಡಬೇಕು? ಸರ್ಕಾರದಿಂದ ನಾವು ಏನನ್ನು ನಿರೀಕ್ಷಿಸಬಹುದು? ಇದು ನಿಲ್ಲಬೇಕು. ಇದಕ್ಕಿಂತ ಚಂದದ ದೀಪಗಳಿವೆʼ ಎಂದು ನಾಲಗೆ ಹರಿಯಬಿಟ್ಟಿದ್ದಾರೆ.

ಅಯೋಧ್ಯೆಯ ದೀಪೋತ್ಸವಕ್ಕೆ ಮೊದಲು ನೀಡಿದ ಈ ಹೇಳಿಕೆಗಳನ್ನು ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಬಿಜೆಪಿ ನಾಯಕರು, ಹಿಂದು ಮುಖಂಡರು ಈ ಹೇಳಿಕೆಯನ್ನು ಖಂಡಿಸಿದ್ದಾರೆ.

ಈ ಬಾರಿ ಅಯೋಧ್ಯೆಯಲ್ಲಿ 26,11,101 ಹಣತೆ ಬೆಳಗುವ ಮೂಲಕ ಅಪರೂಪದ ದೀಪೋತ್ಸವ ಆಚರಿಸಿ ದಾಖಲೆ ಬರೆಯಲು ರಾಜ್ಯ ಸರ್ಕಾರ ಸಜ್ಜಾದ ಬೆನ್ನಲ್ಲೇ ಅಖಿಲೇಶ್‌ ಯಾದವ್‌ ಅವರ ಹೇಳಿಕೆ ಹೊರಬಿದ್ದಿದೆ.

error: Content is protected !!