Monday, October 20, 2025

ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವಿನ ಸಂಭ್ರಮ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಆತಿಥೇಯ ಆಸ್ಟ್ರೇಲಿಯಾ ತಂಡ 7 ವಿಕೆಟ್​ಗಳಿಂದ ಗೆದ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಭಾನುವಾರ ಪರ್ತ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆಸೀಸ್‌ ನಾಯಕ ಮಿಚೆಲ್‌ ಮಾರ್ಷ್‌ ಬೌಲಿಂಗ್‌ ಆಯ್ದುಕೊಂಡರು. ಬೌಲರ್‌ಗಳು ಸಂಘಟಿತ ಬೌಲಿಂಗ್‌ ದಾಳಿ ಮೂಲಕ ನಾಯಕನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಡಕ್‌ವರ್ತ್‌ ಲೂಯಿಸ್‌ ನಿಯಮದ ಪ್ರಕಾರ 26 ಓವರ್‌ಗೆ ಭಾರತ 9 ವಿಕೆಟ್‌ಗೆ 136 ರನ್‌ಗಳಿಸಿತು. ಆಸ್ಟ್ರೇಲಿಯಾಕ್ಕೆ ಗೆಲುವಿಗೆ 131 ರನ್‌ ಗುರಿ ನೀಡಲಾಯಿತು.

ಈ ಸಣ್ಣ ಮೊತ್ತವನ್ನು ಆಸೀಸ್‌ 21.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಬಾರಿಸಿ ಗೆಲುವಿನ ದಡ ಸೇರಿಸಿತು. ಚೇಸಿಂಗ್‌ ವೇಳೆ ಆಸೀಸ್‌ ಪರ ನಾಯಕ ಅಜೇಯ 46 ರನ್‌ ಗಳಿಸಿದರೆ, ಜೋಶ್‌ ಫಿಲಿಪ್‌ 37 ರನ್‌ ಗಳಿಸಿರು. ಭಾರತ ಪರ ಅಕ್ಷರ್‌ ಪಟೇಲ್‌, ಸುಂದರ್‌ ಮತ್ತು ಅರ್ಶ್‌ದೀಪ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಹಲವು ಬಾರಿ ಮಳೆ ಅಡಚಣೆ
ಹವಾವಾನ ಇಲಾಖೆ ಮುನ್ಸೂಚನೆಯಂತೆ ಪಂದ್ಯಕ್ಕೆ ಹಲವು ಬಾರಿ ಮಳೆ ಅಡಚಣೆ ಉಂಟು ಮಾಡಿತು. ಆರಂಭದಲ್ಲಿ ಪಂದ್ಯವನ್ನು 32 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ ಮತ್ತೆ ಮಳೆ ಸುರಿದ ಕಾರಣ ಎರಡನೇ ಬಾರಿಗೆ ಪಂದ್ಯದ ಓವರ್‌ ಕಡಿತ ಮಾಡಿ 26 ಓವರ್‌ಗೆ ಸೀಮಿತಗೊಳಿಸಲಾಯಿತು.

error: Content is protected !!