ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈಲ್ವೆ ಪ್ರಯಾಣಿಕರನ್ನು ದಾರಿ ತಪ್ಪಿಸುವ ಸಾಮಾಜಿಕ ಜಾಲತಾಣಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಹಬ್ಬಗಳ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವುದನ್ನು ಹಲವು ಸಾಮಾಜಿಕ ಜಾಲತಾಣಗಳ ನಿರ್ವಾಹಕರು ದುರುಪಯೋಗಪಡಿಸಿಕೊಂಡು ಪ್ರಯಾಣಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿರುವುದ ರೈಲ್ವೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಇಂತಹ ಕಿಡಿಗೇಡಿ ತನ ಮಾಡುತ್ತಿರುವ 20ಕ್ಕೂ ಹೆಚ್ಚು ಸಾಮಾಜಿಕ ಜಾಲತಾಣ ನಿರ್ವಾಹಕರನ್ನು ರೈಲ್ವೆ ಇಲಾಖೆಯ ಜಾಗೃತ ದಳ ಗುರುತಿಸಿದೆ.
ಈ ಎಲ್ಲ ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಿಸಿ, ಅವರ ಸಾಮಾಜಿಕ ಜಾಲತಾಣ ಖಾತೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು ಸಹ ರೈಲ್ವೆ ಸಚಿವಾಲಯ ನಿರ್ದೇಶಿಸಿದೆ. ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ ಉಂಟಾಗಿರುವುದು ಹಾಗೂ ರೈಲುಗಳ ಆಗಮನ-ನಿಗಮನದ ಬಗ್ಗೆ ರೈಲ್ವೆ ಇಲಾಖೆ ನೀಡುವ ನಿಖರ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಗೊಂದಲಕಾರಿ ಹಾಗೂ ಸುಳ್ಳು ಸುದ್ದಿಗಳನ್ನು ನಂಬದಿರುವಂತೆಯೂ ಈ ವೇಳೆ ರೈಲ್ವೆ ಇಲಾಖೆ ಪ್ರಯಾಣಿಕರಲ್ಲಿ ಮನವಿ ಮಾಡಿದೆ.