ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಖುದ್ದು ದಿಲ್ಲಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮಿನಿ ನಿಯಂತ್ರಣ ಕೊಠಡಿ, ಭದ್ರತಾ ವ್ಯವಸ್ಥೆ, ಸಿಸಿ ಟಿವಿ ಕ್ಯಾಮರಾಗಳ ನಿಗಾ ವ್ಯವಸ್ಥೆ ಮೊದಲಾದವುಗಳನ್ನು ಪರಿಶೀಲಿಸಿದ ಅವರು, ಬಳಿಕ ಸಚಿವ ಅಶ್ವಿನಿ ವೈಷ್ಣವ್, ಪ್ರಸಕ್ತ ನವೀಕರಣಗೊಂಡಿರುವ ದೆಹಲಿ ರೈಲು ನಿಲ್ದಾಣವು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದು, ಪ್ರಯಾಣಿಕರಿಗೆ ಯಾವುದೇ ಅನಾನೂಕೂಲತೆ ಆಗದಂತೆ ರೈಲ್ವೆ ಇಲಾಖೆ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಟಿಕೆಟ್ ಕೌಂಟರ್ ಗಳನ್ನು ತೆರೆಯಲಾಗಿದೆ.
ಶೌಚಾಲಯಗಳು ಮತ್ತಿತರ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸಲಾಗಿದೆ. ದೆಹಲಿ ರೈಲ್ವೆ ನಿಲ್ದಾಣದಲ್ಲಿ ಏಕಕಾಲಕ್ಕೆ 75 ಸಾವಿರ ಪ್ರಯಾಣಿಕರು ಸಂಚರಿಸಲು ಸೂಕ್ತವಾಗುವಂತೆ ಅದನ್ನು ಪುನರ್ ರೂಪಿಸಲಾಗಿದೆ. ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ರೈಲ್ವೆ ಸಿಬ್ಬಂದಿಯು ದಿನದ 24 ಗಂಟೆಯೂ ಸತತವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರಿಗೆ ಎಲ್ಲ ಬಗೆಯ ನೆರವು ನೀಡುತ್ತಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ದೇಶಾದ್ಯಂತ 1 ಸಾವಿರದ 200ಕ್ಕೂ ಹೆಚ್ಚು ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಗನುಸಾರವಾಗಿ ರೈಲುಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದರು.
‘ದೀಪಾವಳಿ’ ಪ್ರಯಾಣಿಕರ ದಟ್ಟಣೆ: ಖುದ್ದು ದಿಲ್ಲಿ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಅಶ್ವಿನಿ ವೈಷ್ಣವ್
