ಹೊಸ ದಿಗಂತ ವರದಿ,ವಿಜಯಪುರ:
ಮಾತಿನ ಭರದಲ್ಲಿ ಆಡಿದ ಮಾತುಗಳನ್ನೇ ದೊಡ್ಡದು ಮಾಡಿ ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳನ್ನು ಅಪಮಾನ ಮಾಡುವ ಕೆಲಸ ನಡೆಯುತ್ತಿರುವುದು ಸರಿಯಲ್ಲ ಎಂದು ಶಿವಸೇನೆ (ಏಕನಾಥ ಶಿಂಧೆ ಬಣ) ರಾಜ್ಯ ಘಟಕದ ಅಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂಬಿಗರ ಚೌಡಯ್ಯನವರು ಸಹ ಕಟುವಾಗಿ ತಮ್ಮ ವಚನಗಳಲ್ಲಿ ಅನ್ಯಾಯವನ್ನು ವಿರೋಧಿಸಿದ್ದಾರೆ. ಇದೇ ಮಾದರಿಯಲ್ಲಿ ಕನ್ಹೇರಿ ಶ್ರೀಗಳು ಒಡಕು ಮೂಡಿಸುವುದರ ವಿರುದ್ಧ ಕಿಡಿಕಾರಿದ್ದಾರೆ ಎಂದರು.
ಮಾತಿನ ಭರದಲ್ಲಿ ಶ್ರೀಗಳು ಮಾತನಾಡಿರಬಹುದು, ಲಿಂಗಾಯತ ಮಹಾಸಭೆಗೆ ಸೂತ್ರಧಾರಿಯಾಗಿರುವ ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಶ್ರೀಗಳಿಗೆ ಕರೆ ಮಾಡಿ ಈ ವಿಷಯದ ಬಗ್ಗೆ ಮನವರಿಕೆ ಮಾಡಿಕೊಟ್ಟು ಕ್ಷಮೆ ಕೇಳುವಂತೆ ಹೇಳಿದ್ದರೆ ಈ ವಿಷಯ ದೊಡ್ಡದಾಗುತ್ತಿರಲಿಲ್ಲ. ಆದರೆ ಹಿಂಬಾಲಕರಿಂದ ಈ ವಿಷಯವನ್ನು ದೊಡ್ಡದು ಮಾಡಿದ್ದು ಯಾರು? ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಎಗ್ಗಿಲ್ಲದೇ ಗಾಂಜಾ ದೊರಕುತ್ತಿದೆ, ಈ ಎಲ್ಲವೂಗಳನ್ನು ಕಡಿವಾಣ ಹಾಕುವ ಬದಲು ಈ ವಿಷಯವನ್ನು ದೊಡ್ಡದು ಮಾಡುವುದು ಇರಲಿಲ್ಲ, ಈ ವಿವಾದವನ್ನು ಕನ್ಹೇರಿ ಶ್ರೀಗಳು ತಿಳಿಗೊಳಿಸಬೇಕು. ಆ ರೀತಿ ಶಬ್ದ ಬಳಕೆಯನ್ನೂ ನಾನು ಸಹ ಒಪ್ಪುವುದಿಲ್ಲ ಎಂದರು.
ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವುದು ನನ್ನ ಭಾವನೆ ಕೂಡಾ ಹೌದು, ಸಂಘ ಪರಿವಾರ ಬಲಿಷ್ಠವಾದರೆ ತಮ್ಮ ಸೋಲು ಎಂಬ ಭಯದಿಂದ ಪ್ರಿಯಾಂಕ್ ಖರ್ಗೆ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆ ಆ್ಯಂಡ್ ಟೀಂಗೆ ತಕ್ಕ ಪಾಠ ಕಲಿಸಲಿದ್ದೇವೆ. ಸಂಘ ಪರಿವಾರದ ಪಥಸಂಚಲನದಲ್ಲಿ ಭಾಗಿಯಾದ ಪಿಡಿಓಗೆ ಅಮಾನತ್ತು ಮಾಡಲಾಗಿದೆ. ಆದರೆ ಅನೇಕ ಭ್ರಷ್ಟ ಪಿಡಿಓಗಳು ಅವರ ಸುತ್ತ ಸುತ್ತುತ್ತಾರೆ ಅವರನ್ನು ಅಮಾನತ್ತು ಮಾಡಲಿ ಎಂದರು.
ಗಡಿ ವಿವಾದ ಕೆದಕುವವರು ಉದ್ಛವ ಠಾಕ್ರೆ ಬಣದವರು, ಉದ್ಧವ ಠಾಕ್ರೆ ಅವರಂತಹ ನಾಯಕರು ಕರ್ನಾಟಕ- ಮಹಾರಾಷ್ಟ್ರದಲ್ಲಿ ಗಡಿ ವಿವಾದದ ಸೃಷ್ಟಿ ಮಾಡುತ್ತಾರೆ. ಭಾಷೆ, ಗಡಿ ವಿವಾದವನ್ನು ಉದ್ಛವ ಠಾಕ್ರೆ ಬಣದವರು ಕೆಣಕುತ್ತಾರೆ. ಈ ಹಿಂದೆ ಮರಾಠಿ- ಹಿಂದಿ ಭಾಷಿಕರ ಸಂಘರ್ಷ ನಡೆದಾಗ ಏಕನಾಥ ಶಿಂಧೆ ಹಿಂದಿ ಭಾಷಿಕರ ಪರ ನಿಂತುಕೊಂಡರು ಎಂದರು.
ಸ್ಥಳೀಯ ಸಂಸ್ಥೆಯಿಂದ ಹಿಡಿದು ಲೋಕಸಭೆಗೆ ಶಿವಸೇನೆ ಕರ್ನಾಟಕದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಹಿಂದೂಗಳಿಗೆ ಭಾರತದಲ್ಲಿ ಪ್ರಥಮಾದ್ಯತೆ ದೊರಕಬೇಕು. ಭಾರತ ವಿಶ್ವದಲ್ಲಿಯೇ ಸರ್ವತೋಮುಖ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಎರಡು ಮಹತ್ವದ ಸಂಕಲ್ಪವನ್ನು ಶಿವಸೇನೆ ಹೊಂದಿದೆ. ರಾಜ್ಯದಲ್ಲಿ ಪ್ರಬಲವಾಗಿ ಪಕ್ಷ ಸಂಘಟನೆ ಮಾಡಲಾಗುವುದು ಎಂದರು.
ಕುಂಭಕರ್ಣ ನಿದ್ರೆಯಲ್ಲಿ ರಾಜ್ಯ ಸರ್ಕಾರ ಇದೆ. ಧಾರಕಾರ ಮಳೆಯಿಂದಾಗಿ ರೈತ ಸಂಕಷ್ಟದಲ್ಲಿದ್ದರೂ ಸಹ ರಾಜ್ಯ ಸರ್ಕಾರ ರೈತರಿಗೆ ಒಂದೇ ಒಂದು ರೂ. ಪರಿಹಾರ ನೀಡದೇ ಕುಂಭಕರ್ಣ ನಿದ್ರೆಯಲ್ಲಿದೆ. ಇದೊಂದು ದಪ್ಪ ಚರ್ಮದ, ದೇಶದಲ್ಲಿಯೇ ಅತ್ಯಂತ ಕೆಟ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.