Monday, October 20, 2025

ಉತ್ಸಾಹ ನೋಡಿದ್ರೆ ಸಿಎಂ ಸ್ಥಾನದ ನಿರೀಕ್ಷೆಯಲ್ಲಿ ಜೂನಿಯರ್ ಖರ್ಗೆ: ಲಹರ್ ಸಿಂಗ್ ಲೇವಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಹುಲ್ ಗಾಂಧಿಗೆ ಇಷ್ಟವಾಗುವ ರೀತಿಯಲ್ಲಿ ಪ್ರಿಯಾಂಕ್ ಖರ್ಗೆ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅಥವಾ ಡಾ.ಪರಮೇಶ್ವರ್ ಅವರಿಗಿಂತ ಜೂನಿಯರ್ ಖರ್ಗೆ ಹೆಚ್ಚು ನಿಷ್ಠೆ ತೋರುತ್ತಿರುವುದರ ಹಿಂದೆ ದೊಡ್ಡ ಕಾರಣ ಇರಬೇಕು ಎಂದು ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಹೇಳಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ನಿರಂತರವಾಗಿ ಆರೆಸ್ಸೆಸ್ ಅನ್ನು ಟೀಕಿಸುತ್ತಿರುವುದಕ್ಕೆ ತಿರುಗೇಟು ನೀಡಿದ ಅವರು, ಹೈಕಮಾಂಡ್ ತನ್ನನ್ನು ಸಿಎಂ ಮಾಡುವ ನಿರೀಕ್ಷೆಯಲ್ಲಿ ಪ್ರಿಯಾಂಕ್ ಖರ್ಗೆ ಈ ವರ್ತನೆ ತೋರುತ್ತಿರಬಹುದು ಎಂದು ಶಂಕಿಸಿದ್ದಾರೆ.

ತಮ್ಮ ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್ ಹಾಕಿರುವ ಲಹರ್ ಸಿಂಗ್, ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದರೆ, ಕನಿಷ್ಠ ಪಕ್ಷ ಉಪಮುಖ್ಯಮಂತ್ರಿಯಾದರೂ ಆಗಬಹುದು ಎಂಬುದು ಖರ್ಗೆ ಜೂನಿಯರ್​ಗೆ ತಿಳಿದಿದೆ ಎಂದು ಲೇವಡಿ ಮಾಡಿದ್ದಾರೆ.

ಜೂನಿಯರ್ ಖರ್ಗೆಯವರಾದ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕದಲ್ಲಿ ಸಾಕಷ್ಟು ಗದ್ದಲ ಎಬ್ಬಿಸುತ್ತಿದ್ದಾರೆ. ಅವರು ಪ್ರತಿದಿನ ಆರ್‌.ಎಸ್‌.ಎಸ್ ಬಗ್ಗೆ ಪತ್ರಗಳನ್ನು ಬರೆಯುತ್ತಾ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದ್ದಕ್ಕಿದ್ದಂತೆ ಅವರು ಈ ಎಲ್ಲವನ್ನು ಮಾಡಲು ಪ್ರಾರಂಭಿಸಿದ್ದರ ಹಿಂದೆ ದೊಡ್ಡ ಕಾರಣವೇ ಇರಬೇಕು.

ಕರ್ನಾಟಕದ ರಾಜಕೀಯ ವಲಯದಲ್ಲಿ ಅಧಿಕಾರ ಹಸ್ತಾಂತರ ಕುರಿತಂತೆ ಮಾತುಗಳು ಜೋರಾಗಿ ಕೇಳಿ ಬರುತ್ತಿರುವಾಗ, ಖರ್ಗೆ ಜೂನಿಯರ್ ಹೆಚ್ಚುವರಿ ಸೈದ್ಧಾಂತಿಕತೆಯನ್ನು ಪ್ರದರ್ಶಿಸುತ್ತಿದ್ದು, ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರಿಗಿಂತಲೂ ಹೆಚ್ಚು ಸೈದ್ಧಾಂತಿಕರಾಗಿ ಕಾಣಲು ಪ್ರಾರಂಭಿಸಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಏನು ಇಷ್ಟವಾಗುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಯಾವ ಬದಿಯಲ್ಲಿ ಬ್ರೆಡ್​ಗೆ ಬೆಣ್ಣೆ ಹಚ್ಚಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡಿದ್ದಾರೆ. ಅಧಿಕಾರಕ್ಕಾಗಿ ಪೈಪೋಟಿ ನಡೆದಿರುವಾಗ, ಅವರ ತಂದೆಯವರನ್ನು ಹೊರತುಪಡಿಸಿದ, ಕಾಂಗ್ರೆಸ್ಸಿನ ನಿಜವಾದ ಹೈಕಮಾಂಡ್ ಅನ್ನು ಮೆಚ್ಚಿಸಬೇಕೆಂದರೆ, ಆರ್‌.ಎಸ್‌.ಎಸ್ ಅನ್ನು ಬಲವಾಗಿ ಟೀಕಿಸುವುದೇ ಉತ್ತಮ ಮಾರ್ಗ ಎಂದು ಅವರು ತಿಳಿದಂತೆ ಕಾಣುತ್ತಿದೆ ಎಂದು ಲಹರ್ ಸಿಂಗ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಅಭಿಪ್ರಾಯಪಟ್ಟಿದ್ದಾರೆ

ಆರ್‌.ಎಸ್‌.ಎಸ್ ವಿರುದ್ಧ ವಾಗ್ಧಾಳಿ ನಡೆಸುವ ಮೂಲಕ, ಖರ್ಗೆ ಜೂನಿಯರ್ ಅವರು ರಾಹುಲ್ ಗಾಂಧಿಯವರ ಚಿಂತನೆ ಮತ್ತು ಆಲೋಚನಾ ಪ್ರಕ್ರಿಯೆಗಳಿಗೆ ಬಹಳ ಹತ್ತಿರವಿದ್ದಂತೆ ಕಾಣುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಡಾ. ಜಿ. ಪರಮೇಶ್ವರ್, ಎಚ್‌.ಕೆ.ಪಾಟೀಲ್ ಮತ್ತು ಕೃಷ್ಣಬೈರೇಗೌಡ ಸೇರಿದಂತೆ ಕರ್ನಾಟಕದ ಇತರ ಯಾವುದೇ ಕಾಂಗ್ರೆಸ್ ನಾಯಕರಿಗಿಂತ ಹೆಚ್ಚು ನಿಷ್ಠರಾಗಿ ಅವರು ಹೊರಹೊಮ್ಮಿದ್ದಾರೆ ಎಂದು ಬಿಜೆಪಿಯ ರಾಜ್ಯಸಭಾ ಸಂಸದರು ತಿಳಿಸಿದ್ದಾರೆ.

ಖರ್ಗೆ ಜೂನಿಯರ್ ಅವರ ಉತ್ಸಾಹ, ಅವರ ಹೆಚ್ಚುವರಿ ಸೈದ್ಧಾಂತಿಕ ನಿಷ್ಠೆಯನ್ನು ಗಮನಿಸಿ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ಉತ್ತಮ ಪ್ರತಿಫಲ ನೀಡಲಿದೆ. ಸಿದ್ದರಾಮಯ್ಯನವರು ಸದ್ಯೋಭವಿಷ್ಯದಲ್ಲಿ (ನವೆಂಬರ್?) ಕೆಳಗೆ ಇಳಿದ ನಂತರ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಏನಾದರಾಗಲಿ, ಕರ್ನಾಟಕ ರಾಜಕೀಯದಲ್ಲಿ ಸುದೀರ್ಘ ಕಾಲದಿಂದ ಇದ್ದರೂ ಖರ್ಗೆ ಸೀನಿಯರ್ ಅವರಿಗೆ ಕುರ್ಚಿ ಸಿಕಿಲ್ಲ. ಕನಿಷ್ಠ, ಅವರ ಮಗನಿಗಾದರೂ ನಷ್ಟ ಪರಿಹಾರ ನೀಡಬೇಕು. ಕಾಂಗ್ರೆಸ್‌ನಂತಹ ವಂಶರಾಜಕಾರಣದ ಪಕ್ಷದಲ್ಲಿ ಅದು ಬಹಳ ಸೂಕ್ತ ನಿರೀಕ್ಷೆಯೂ ಆಗಿದೆ. ಅಲ್ಲದೆ, ಮುಖ್ಯಮಂತ್ರಿಯಾಗಲು ಪ್ರಯತ್ನಿಸಿದರೆ, ಕನಿಷ್ಠ ಉಪಮುಖ್ಯಮಂತ್ರಿಯಾದರೂ ಆಗಬಹುದು ಎನ್ನುವುದು ಖರ್ಗೆ ಜೂನಿಯರ್ ಅವರಿಗೆ ತಿಳಿದಿದೆ ಎಂದು ಲಹರ್ ಸಿಂಗ್ ವ್ಯಂಗ್ಯ ಮಾಡಿದ್ದಾರೆ.

error: Content is protected !!