ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ. ಈ ಬೆಳಕಿನ ಹಬ್ಬವು ಎಲ್ಲರ ಜೀವನದಲ್ಲಿ ಸಾಮರಸ್ಯ, ಸಂತೋಷ ಮತ್ತು ಸಮೃದ್ಧಿಯನ್ನು ಬೆಳಗಿಸಲಿ ಎಂದು ಅವರು ಹಾರೈಸಿದ್ದಾರೆ.
ದೀಪಾವಳಿಗೆ ‘ಸ್ವದೇಶಿ’ಯ ಶಕ್ತಿ ತುಂಬಲು ಕರೆ!
ಎಕ್ಸ್ ಖಾತೆಯಲ್ಲಿ ಶುಭ ಕೋರಿರುವ ಪ್ರಧಾನಿ ಮೋದಿ, ಹಬ್ಬದ ಸಂಭ್ರಮದೊಂದಿಗೆ ‘ವೋಕಲ್ ಫಾರ್ ಲೋಕಲ್’ (ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ) ಮಂತ್ರವನ್ನು ಪುನರುಚ್ಚರಿಸಿದ್ದಾರೆ. ದೇಶಿಯ ಸರಕುಗಳ ಖರೀದಿಯನ್ನು ಉತ್ತೇಜಿಸುವ ಮೂಲಕ ಸ್ಥಳೀಯ ಕುಶಲಕರ್ಮಿಗಳಿಗೆ ಬೆಂಬಲ ನೀಡುವಂತೆ ದೇಶದ ಜನತೆಗೆ ಕರೆ ನೀಡಿದ್ದಾರೆ.
“140 ಕೋಟಿ ಭಾರತೀಯರ ಕಠಿಣ ಪರಿಶ್ರಮ, ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಈ ದೀಪಾವಳಿಯಲ್ಲಿ ಆಚರಿಸೋಣ. ಭಾರತೀಯ ಉತ್ಪನ್ನಗಳನ್ನು ಖರೀದಿಸಿ, ಅದನ್ನು ‘ಗರ್ವದಿಂದ ಇದು ಸ್ವದೇಶಿ ಉತ್ಪನ್ನ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೂ ಸ್ಫೂರ್ತಿ ನೀಡಿ,” ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಇದರೊಂದಿಗೆ, ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕತೆಯ ಮನೋಭಾವ ಮೇಲುಗೈ ಸಾಧಿಸಲಿ ಎಂದೂ ಅವರು ಹಾರೈಸಿದ್ದಾರೆ.
ರಾಷ್ಟ್ರಪತಿ, ಗೃಹಸಚಿವರ ಶುಭಾಶಯ
ಇದೇ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ದೇಶದ ಹಾಗೂ ವಿಶ್ವದಾದ್ಯಂತ ಇರುವ ಎಲ್ಲಾ ಭಾರತೀಯರಿಗೆ ದೀಪಾವಳಿಯ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಜನತೆಗೆ ದೀಪಾವಳಿ ಶುಭಾಶಯ ಕೋರಿ, “ದೀಪಗಳ, ಸಂತೋಷದ ಹಬ್ಬ ದೀಪಾವಳಿ ಶುಭಾಶಯಗಳು. ಎಲ್ಲರ ಆರೋಗ್ಯ ಮತ್ತು ಸಮೃದ್ಧಿಗಾಗಿ ನಾನು ಭಗವಾನ್ ಶ್ರೀ ರಾಮನಲ್ಲಿ ಪ್ರಾರ್ಥಿಸುತ್ತೇನೆ,” ಎಂದು ತಿಳಿಸಿದ್ದಾರೆ.