Tuesday, October 21, 2025

ಕರ್ತವ್ಯದ ಒತ್ತಡಕ್ಕೆ ಕಗ್ಗೊಲೆಯಾದ ಜೀವ: ಓಲಾ ಸಿಇಒ, ಅಧಿಕಾರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಕೇಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರವಾಲ್ ಹಾಗೂ ಹಿರಿಯ ಕಾರ್ಯನಿರ್ವಾಹಕ ಸುಬ್ರತ್ ಕುಮಾರ್ ದಾಸ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ. ಇವರು ಉದ್ಯೋಗಿಯನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕಂಪನಿಯ ಹೋಮೋಲೋಗೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೆ. ಅರವಿಂದ್ (38), ಸೆಪ್ಟೆಂಬರ್ 28 ರಂದು ತಮ್ಮ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಸುಬ್ರಹ್ಮಣ್ಯಪುರ ಪೊಲೀಸರು ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿದ್ದರು.

28 ಪುಟಗಳ ಡೆತ್ ನೋಟ್‌ನಲ್ಲಿ ಕಿರುಕುಳದ ಆರೋಪ
ಅರವಿಂದ್ ಅವರ ಸಾವಿನ ನಂತರ ಅವರ ಕುಟುಂಬಕ್ಕೆ ದೊಡ್ಡ ಮೊತ್ತದ ಹಣ ಜಮೆಯಾದ ಕಾರಣ ಅನುಮಾನ ಮೂಡಿತ್ತು. ಅರವಿಂದ್ ಸಾವಿನ ಎರಡು ದಿನಗಳ ನಂತರ, ಅವರ ಬ್ಯಾಂಕ್ ಖಾತೆಗೆ ಕಂಪನಿಯಿಂದ ಬರೋಬ್ಬರಿ ₹17.46 ಲಕ್ಷ ಹಣ ಜಮೆ ಆಗಿತ್ತು. ಈ ಕುರಿತು ಕಂಪನಿಯ ಅಧಿಕಾರಿಗಳನ್ನು ಮತ್ತು ಹೆಚ್‌ಆರ್ ವಿಭಾಗದ ಸಿಬ್ಬಂದಿಯನ್ನು ಕುಟುಂಬಸ್ಥರು ಪ್ರಶ್ನಿಸಿದಾಗ, ಅವರಿಗೆ ಸರಿಯಾದ ಅಥವಾ ಸ್ಪಷ್ಟ ಉತ್ತರ ದೊರೆತಿರಲಿಲ್ಲ.

ಬಳಿಕ ಕುಟುಂಬ ಸದಸ್ಯರು ಮನೆಯಲ್ಲಿ ಪರಿಶೀಲಿಸಿದಾಗ, ಅರವಿಂದ್ ಬರೆದ 28 ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಈ ಡೆತ್ ನೋಟ್‌ನಲ್ಲಿ ಅವರು ತಮ್ಮ ಆತ್ಮಹತ್ಯೆಗೆ ಕಾರಣವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.

ನೋಟ್‌ನಲ್ಲಿ, ಹಿರಿಯ ಅಧಿಕಾರಿ ಸುಬ್ರತ್ ಕುಮಾರ್ ಮತ್ತು ಸಿಇಒ ಭವಿಶ್ ಅಗರವಾಲ್ ಅವರು ಕೆಲಸದ ವಿಚಾರವಾಗಿ ತೀವ್ರ ಒತ್ತಡ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಸರಿಯಾದ ಸಮಯದಲ್ಲಿ ಭತ್ಯೆ ಮತ್ತು ವೇತನ ನೀಡದೆ ಮಾನಸಿಕವಾಗಿ ಕಿರುಕುಳ ನೀಡಿದ್ದರಿಂದ, ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದರು.

ಈ ಡೆತ್ ನೋಟ್ ಮತ್ತು ದೂರಿನ ಆಧಾರದ ಮೇಲೆ, ಅರವಿಂದ್ ಅವರ ಸಹೋದರ ಅಶ್ವಿನ್ ಕಣ್ಣನ್ ಅವರು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈ ದೂರಿನನ್ವಯ ಭವಿಶ್ ಅಗರವಾಲ್, ಸುಬ್ರತ್ ಕುಮಾರ್ ದಾಸ್ ಮತ್ತು ಓಲಾ ಎಲೆಕ್ಟ್ರಿಕ್ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

error: Content is protected !!