Tuesday, October 21, 2025

ನೋವು ಮರೆತು ಬೆಳಕು ಹಂಚಿದ ಸಮಂತಾ: ಎನ್‌ಜಿಓ ಮಕ್ಕಳಿಗಾಗಿ ಸ್ಪೆಷಲ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಾಲಿವುಡ್‌ನ ಜನಪ್ರಿಯ ನಟಿ ಸಮಂತಾ ರುತ್‌ಪ್ರಭು ಅವರು ತಮ್ಮ ವೃತ್ತಿಜೀವನದ ಜೊತೆಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸಮಂತಾ ಅವರು ತಮ್ಮ ನೆಚ್ಚಿನ ಎನ್‌ಜಿಓಗಳಿಗೆ ಭೇಟಿ ನೀಡಿ, ಅನಾಥ ಮತ್ತು ಅಶಕ್ತ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ವಿಚ್ಛೇದನ, ತಂದೆಯ ನಿಧನ ಮತ್ತು ದೀರ್ಘಕಾಲದ ಅನಾರೋಗ್ಯದಂತಹ ಸವಾಲುಗಳನ್ನು ಎದುರಿಸುತ್ತಿರುವ ‘ಇಂಡಿಪೆಂಡೆಂಟ್ ವುಮೆನ್’ ಸಮಂತಾ, ಆ ನೋವುಗಳ ಮಧ್ಯೆಯೂ ಸಾಮಾಜಿಕ ಕಳಕಳಿಯನ್ನು ಮರೆತಿಲ್ಲ. ಸ್ಪೂರ್ತಿ ಫೌಂಡೇಶನ್, ಹ್ಯಾಪಿ ಹೋಮ್ಸ್ ಹಾಗೂ ಡಿಸೈರ್ ಸೊಸೈಟಿ ಎನ್‌ಜಿಓಗಳ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು.

ನಟಿ ಸಮಂತಾ ಅನಾಥಾಶ್ರಮದ ‘ದೇವರ ಮಕ್ಕಳ’ ಜೊತೆ ಸೇರಿ ದೀಪಗಳನ್ನು ಬೆಳಗುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ಸರಳವಾಗಿ ಆಚರಿಸಿದ ಈ ದೀಪಾವಳಿಯಲ್ಲಿ ಸಮಂತಾ ಅವರು ಮಕ್ಕಳೊಂದಿಗೆ ಕೆಲಹೊತ್ತು ಕಳೆದು, ಅವರೊಂದಿಗೆ ಸಂವಾದ ನಡೆಸಿದರು. ವಿಶೇಷವಾಗಿ, ಮಕ್ಕಳಿಗೆ ಪ್ರೀತಿಯ ದೀಪಾವಳಿ ಉಡುಗೊರೆಗಳನ್ನು ನೀಡಿ, ಅವರ ಮುಖದಲ್ಲಿ ಸಂತಸ ಮತ್ತು ನಗು ಮೂಡಲು ಕಾರಣರಾದರು.

ಪ್ರತಿ ವರ್ಷವೂ ತಪ್ಪದೇ ಅತಿಥಿಯಾಗಿ ಆಗಮಿಸಿ ಈ ಮಕ್ಕಳೊಂದಿಗೆ ದೀಪಾವಳಿಯನ್ನು ಆಚರಿಸುವ ಸಮಂತಾ ಅವರ ಈ ಕಾರ್ಯವು ನಿಜಕ್ಕೂ ಪ್ರಶಂಸನೀಯ ಮತ್ತು ಇತರರಿಗೆ ಮಾದರಿಯಾಗಿದೆ.

error: Content is protected !!