ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ 38 ವರ್ಷದ ಸ್ಪಿನ್ನರ್ ಆಸಿಫ್ ಅಫ್ರಿದಿ ಪಾದಾರ್ಪಣೆ ಮಾಡಿದ್ದಾರೆ. ಇದರೊಂದಿಗೆ, ಪಾಕ್ ಪರ ಟೆಸ್ಟ್ ಕ್ರಿಕೆಟ್‌ಗೆ ಅತಿ ಹೆಚ್ಚು ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ ಮಾಡಿದ ಎರಡನೇ ಹಿರಿಯ ಆಟಗಾರ ಎಂಬ ದಾಖಲೆಯನ್ನು ಅವರು ಬರೆದಿದ್ದಾರೆ.
ದಾಖಲೆ ವೀರ ಮಿರಾನ್ ಬಕ್ಷ್
ಪಾಕಿಸ್ತಾನ ಪರ ಅತ್ಯಂತ ಹಿರಿಯ ಆಟಗಾರನಾಗಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ದಾಖಲೆ ಮಿರಾನ್ ಬಕ್ಷ್ ಅವರ ಹೆಸರಿನಲ್ಲಿದೆ. 1955 ರಲ್ಲಿ ಭಾರತದ ವಿರುದ್ಧ ತಮ್ಮ ಮೊದಲ ಪಂದ್ಯ ಆಡುವಾಗ ಬಕ್ಷ್ ಅವರ ವಯಸ್ಸು ಬರೋಬ್ಬರಿ 47 ವರ್ಷ ಮತ್ತು 284 ದಿನಗಳು ಆಗಿತ್ತು. ಈ ದಾಖಲೆಯು ಅಜೇಯವಾಗುಳಿದಿದೆ. ಇದೀಗ 38ನೇ ವಯಸ್ಸಿನಲ್ಲಿ ಆಸಿಫ್ ಅಫ್ರಿದಿ ಕಣಕ್ಕಿಳಿಯುವ ಮೂಲಕ ಆ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಆಸಿಫ್ ಅಫ್ರಿದಿ ಅವರು ದೇಶೀಯ ಕ್ರಿಕೆಟ್‌ನಲ್ಲಿ ತೋರಿರುವ ಸ್ಥಿರ ಪ್ರದರ್ಶನದಿಂದಾಗಿ ಈ ಮಹತ್ವದ ಅವಕಾಶ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್: 57 ಪಂದ್ಯಗಳಲ್ಲಿ 198 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 13 ಬಾರಿ ಐದು ವಿಕೆಟ್ ಗಳಿಸಿದ ಸಾಧನೆಯೂ ಸೇರಿದೆ. ಬ್ಯಾಟಿಂಗ್‌ನಲ್ಲಿ ಒಂದು ಶತಕವನ್ನೂ ಬಾರಿಸಿದ್ದಾರೆ.
ಇತರೆ ಫಾರ್ಮ್ಯಾಟ್‌ಗಳು: ಲಿಸ್ಟ್ ಎ ಕ್ರಿಕೆಟ್‌ನಲ್ಲಿ 83 ವಿಕೆಟ್‌ಗಳು ಮತ್ತು ಟಿ20 ಕ್ರಿಕೆಟ್‌ನಲ್ಲಿ 78 ವಿಕೆಟ್‌ಗಳನ್ನು ಪಡೆದಿದ್ದಾರೆ.
ಕಳೆದ ಹಲವು ವರ್ಷಗಳಿಂದ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಅವರಿಗೆ 38ನೇ ವಯಸ್ಸಿನಲ್ಲಿ ಪಾಕ್ ಟೆಸ್ಟ್ ತಂಡದಲ್ಲಿ ಸ್ಥಾನ ಒಲಿದಿದೆ.
ಭ್ರಷ್ಟಾಚಾರ ನಿಷೇಧದಿಂದ ಹೊರಬಂದು ತಂಡಕ್ಕೆ ಎಂಟ್ರಿ
ಆಸಿಫ್ ಅಫ್ರಿದಿ ಅವರ ಈ ಪಾದಾರ್ಪಣೆಯ ಹಿಂದಿನ ದಾರಿ ಸುಗಮವಾಗಿರಲಿಲ್ಲ. 2022 ರಲ್ಲಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಅವರ ಮೇಲೆ 2 ವರ್ಷಗಳ ನಿಷೇಧ ಹೇರಲಾಗಿತ್ತು. ಪಾಕಿಸ್ತಾನ ಕಪ್ ಮತ್ತು ರಾಷ್ಟ್ರೀಯ ಟಿ20 ಟೂರ್ನಮೆಂಟ್ ಸಂದರ್ಭದಲ್ಲಿ ಬುಕ್ಕಿಗಳು ಸಂಪರ್ಕಿಸಿದ್ದ ವಿಷಯವನ್ನು ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಗಮನಕ್ಕೆ ತರದೇ ಮುಚ್ಚಿಟ್ಟಿದ್ದರು. ಈ ನಿಷೇಧದ ಅವಧಿ ಮುಗಿದ ಬೆನ್ನಲ್ಲೇ, ತಮ್ಮ ಫಿಟ್‌ನೆಸ್ ಮತ್ತು ಫಾರ್ಮ್ ಅನ್ನು ಉಳಿಸಿಕೊಂಡು ಇದೀಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.