ಹೊಸದಿಗಂತ ವರದಿ ಯಲ್ಲಾಪುರ :
ತಾಲೂಕಿನ ಬೇಡ್ತಿ ನದಿ ತಟದಲ್ಲಿರುವ ಹೊಳೆಹುಲಿಯಪ್ಪನಲ್ಲಿಗೆ ದೀಪಾವಳಿಯ ನರಕ ಚತುರ್ದಶಿಯ ದಿನವಾದ ಸೋಮವಾರ ಅಪಾರಸಂಖ್ಯೆಯಲ್ಲಿ ಭಕ್ತರುಗಳು ತೆರಳಿ ವಿಶೇಷವಾದ ತೆಂಗಿನಕಾಯಿಯ ವಾರ್ಷಿಕ ಹರಕೆ ಪೂಜೆಸಲ್ಲಿಸಿದರು.ನರಕಚತುರ್ಧಶಿಯಂದು ಸುತ್ತಮುತ್ತಲಿನ ಹಳ್ಳಿಯ ಜನರು ದನಬಾಲಕಾಯಿ ನೀಡುವ ಪಧ್ದತಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ.
ಆದರೆ ಈ ಬಾರಿ ವಿಶೇಷ ವಾಗಿ ಗ್ರಾಮಸ್ಥರು ಬೇಡ್ತಿ ತಿರುವು ಯೋಜನೆ ಜಾರಿಯಾಗದಂತೆ ಕಾಪಾಡು ಎಂದು ಹುಲಿಯಪ್ಪ ದೇವರಲ್ಲಿ ಮೊರೆಹೋಗಿದ್ದಾರೆ. ಬೇಡ್ತಿ ನದಿಯ ಸೌಂದರ್ಯದ ಹಿಂದೆ ಒಂದು ಗಾಢ ಮೌನವೂ ಅಡಗಿದೆ. ಅದರ ಸೌಂದರ್ಯಕ್ಕಿಂತ ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವ ಆಡಳಿತಗಳಿಗೆ ಬೇರೆಯದೇ ವಿಧದಲ್ಲಿ ಗೋಚರವಾಗುತ್ತದೆ. ಮೂರ್ನಾಲ್ಕು ದಶಕಗಳ ಹಿಂದೆ ಬೇಡ್ತಿ ಜಲವಿದ್ಯುತ್ ಯೋಜನೆಯಿಂದ ಬಚಾವಾದ ನಮ್ಮ ಹಿಂದಿನ ತಲೆಮಾರುಗಳಂತೆಯೇ, ಇದೀಗ ನಾವು ಕೂಡ ಇಂಥದೊಂದು ಯೋಜನೆಯನ್ನು ವಿರೋಧಿಸುವ ಸಂದರ್ಭ ಎದುರಾಗಿದೆ.
ಇದೀಗ ಮತ್ತೆ ತೂಗುಕತ್ತಿಯಂತೆ ಕಾಡುತ್ತಿರುವುದು ಬೇಡ್ತಿ ನದಿ ತಿರುವು ಯೋಜನೆ. ಪರಿಹಾರ ಕ್ಕಾಗಿ ಪೂಜ್ಯ ಸ್ವರ್ಣ ವಲ್ಲೀ ಶ್ರೀಗಳ ಆಶಯದಂತೆ ಬೇಡ್ತಿ ಹುಲಿಯಪ್ಪನ ಮೊರೆ ಹೋಗಿದ್ದೇವೆ. ಆ ವ್ಯಾಘ್ರ ನಾರಾಯಣನಿಗೆ ಮುಂದೆಯೂ ನಿರಂತರವಾಗಿ ಪೂಜೆ ಸಲ್ಲಬೇಕೆಂದರೆ ಈ ಯೋಜನೆಯಿಂದ ನಮ್ಮೆಲ್ಲರನ್ನೂ ಪಾರು ಮಾಡಬೇಕಿದೆ. ವಿ| ಶಿವರಾಮ ಭಾಗ್ವತ್ ಮಣ್ಕುಳಿ ಅವರು ಎಲ್ಲರ ಪರವಾಗಿ ಪ್ರಾರ್ಥಿಸಿದರು.
ಉಪಳೇಶ್ವರ, ಹುತ್ಕಂಡ,ಚಂದ್ಗುಳಿ, ಮಳಲಗಾಂವ್, ಗಾಣಗದ್ದೆ, ಮಾಗೋಡ, ಕಂಚನಹಳ್ಳಿ, ತಾರಿಮಕ್ಕಿ, ಹಂಡ್ರಮನೆ,ಮಂಚಿಕೇರಿ, ಚಿಕ್ಕೊತ್ತಿ ಭಾಗದ ಭಕ್ತರು ಬಾಲಕಾಯಿ ಅರ್ಪಿಸಿದರು.ಈ ರೀತಿಯ ಪೂಜೆ ಹರಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಈ ದಿನ ಹುಲಿಯಪ್ಪನಿಗೆ ಪ್ರತಿ ಕುಟುಂಬದವರು ತಮ್ಮ ಕೊಟ್ಟಿಗೆಯಲ್ಲಿರುವ ದನಗಳ ಲೆಕ್ಕಹಾಕಿ ಬಾಲಕ್ಕೊಂದರಂತೆ ಕಾಯಿ ಸಮರ್ಪಿಸುತ್ತಾರೆ.ಮೇವಿಗಾಗಿ ಬಿಟ್ಟ ದನಕರುಗಳನ್ನು ಈ ಹುಲಿಯಪ್ಪದೇವರು ಹುಲಿಯಿಂದ ಕಾಪಾಡುತ್ತಾನೆಂಬ ಪ್ರತೀತಿಯಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಹುಲಿಯಪ್ಪದೇವರಿಗೆ ಪೂಜೆ ಸಲ್ಲಿಸಿ ಬರುತ್ತಾರೆ.
ಹೊಳೆಹುಲಿಯಪ್ಪನಲ್ಲಿಗೆ ವಿಶೇಷವಾದ ತೆಂಗಿನಕಾಯಿಯ ವಾರ್ಷಿಕ ಹರಕೆ ಪೂಜೆ
