Tuesday, October 21, 2025

ನಂದಗೋಕುಲದಂತಾದ ಅಯೋಧ್ಯೆ, ದೀಪದ ಬೆಳಕಲ್ಲಿ ಕಂಗೊಳಿಸಿದ ರಾಮನೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಮನೂರು ಅಯೋಧ್ಯೆ ದೀಪದ ಬೆಳಕಿನಲ್ಲಿ ಕಂಗೊಳಿಸುತ್ತಿದೆ. ಅಯೋಧ್ಯೆಯಲ್ಲಿ 26 ಲಕ್ಷಕ್ಕೂ ಅಧಿಕ ಮಣ್ಣಿನ ದೀಪಗಳನ್ನು ಹಚ್ಚಿ ಅಕ್ಷರಶಃ ಅಂಧಕಾರವನ್ನು ಹೊಡೆದೋಡಿಸಲಾಗಿದೆ.

ಅಷ್ಟೇ ಅಲ್ಲದೇ ದೀಪ ಬೆಳಗಿಸುವ ಮೂಲಕ ಎರಡು ಗಿನ್ನಿಸ್ ವಿಶ್ವ ದಾಖಲೆಗಳನ್ನು ಗಿಟ್ಟಿಸಿಕೊಳ್ಳಲಾಗಿದೆ. ಈ ದೀಪಗಳ ನದಿಯಲ್ಲಿ ಮಿಂದೆದ್ದ ಅಯೋಧ್ಯೆಯು ಝಗಮಗಿಸುವ ಬೆಳಕಿನಿಂದ ಕಂಗೊಳಿಸಿತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರ ಸ್ವೀಕರಿಸಿದರು.

ಸರಯೂ ನದಿಯ ದಂಡೆಯಲ್ಲಿ 26,17,215 ದೀಪಗಳನ್ನು ಜನರು ಬೆಳಗಿಸಿ, ಅತಿ ದೊಡ್ಡ ದೀಪಗಳ ಪ್ರದರ್ಶನ ಎಂಬುದಕ್ಕಾಗಿ ದಾಖಲೆಯನ್ನು ನಿರ್ಮಿಸಿತು. ಅದರ ಜೊತೆಗೆ ಅತಿ ಹೆಚ್ಚು ಜನರು ಏಕಕಾಲದಲ್ಲಿ ದೀಪದ ಆರತಿಯನ್ನು ಮಾಡಿದ ಎರಡನೇ ದಾಖಲೆಯೂ ನಿರ್ಮಾಣವಾಯಿತು.

ಈ ಸಂದರ್ಭದಲ್ಲಿ ನಡೆದ ರಾಮಲೀಲಾ ಪ್ರದರ್ಶನವು ವಾತಾವರಣಕ್ಕೆ ಮೆರುಗು ನೀಡಿತು. ರಾಮ್ ಕಿ ಪೈಡಿಯಲ್ಲಿ ಅದ್ಭುತ ಲೇಸರ್ ಮತ್ತು ಬೆಳಕಿನ ಪ್ರದರ್ಶನ ಆಯೋಜಿಸಲಾಗಿತ್ತು. ಇದು ಅಲ್ಲಿ ನೆರೆದಿದ್ದ ಜನರನ್ನು ಮಂತ್ರಮುಗ್ಧಗೊಳಿಸುವಂತೆ ಮಾಡಿತ್ತು. ಸಾವಿರಾರು ದೀಪಗಳ ಬೆಳಕಿನೊಂದಿಗೆ ಲೇಸರ್ ಶೋ ಸೇರಿ, ಸರಯೂ ನದಿಯ ದಡವು ದೀಪಗಳಿಂದ ಕಂಗೊಳಿಸಿತು.

error: Content is protected !!