ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಪ್ರಸಿದ್ಧ ಚಾರ್ ಧಾಮ್ ಯಾತ್ರೆ ಅಂತಿಮ ಹಂತ ತಲುಪಿದೆ. ಹಿಮಶಿಖರಗಳ ಮಧ್ಯೆ ನಡೆಯುವ ಈ ಪವಿತ್ರ ಯಾತ್ರೆಯು ಲಕ್ಷಾಂತರ ಭಕ್ತರನ್ನು ಆಕರ್ಷಿಸಿದೆ. ಉತ್ಸಾಹ, ಭಕ್ತಿ, ಮತ್ತು ಪ್ರಕೃತಿಯ ಸೌಂದರ್ಯದ ನಡುವೆಯೇ ಯಾತ್ರಾರ್ಥಿಗಳು ತಮ್ಮ ಧಾರ್ಮಿಕ ಪಯಣವನ್ನು ಪೂರ್ಣಗೊಳಿಸುತ್ತಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಗಂಗೋತ್ರಿ, ಯಮುನೋತ್ರಿ ಹಾಗೂ ಕೇದಾರನಾಥ ದೇವಾಲಯಗಳ ಬಾಗಿಲುಗಳನ್ನು ಅಕ್ಟೋಬರ್ 22 ಮತ್ತು 23ರಂದು ಮುಚ್ಚಲಾಗುತ್ತದೆ. ನಂತರ ನವೆಂಬರ್ 25ರಂದು ಬದರಿನಾಥ ದೇವಾಲಯಕ್ಕೂ ಪ್ರವೇಶವನ್ನು ನಿಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡ ಸರ್ಕಾರ ಈಗ ಚಳಿಗಾಲದ ಚಾರ್ ಧಾಮ್ ಯಾತ್ರೆಗೆ ಸಿದ್ಧತೆ ನಡೆಸುತ್ತಿದೆ. ಮಳೆ ಹಾಗೂ ಹಿಮಪಾತದ ನಡುವೆಯೂ ಯಾತ್ರಾರ್ಥಿಗಳು ಶ್ರದ್ಧೆಯೊಂದಿಗೆ ಪಯಣ ಮುಂದುವರಿಸುತ್ತಿದ್ದಾರೆ. ಪ್ರವಾಸೋದ್ಯಮ ಕಾರ್ಯದರ್ಶಿ ಧೀರಜ್ ಗರ್ಬ್ಯಾಲ್ ಅವರ ಪ್ರಕಾರ, ಈ ವರ್ಷ ಸುಮಾರು 5.9 ಮಿಲಿಯನ್ ಯಾತ್ರಾರ್ಥಿಗಳು ನೋಂದಾಯಿಸಿಕೊಂಡಿದ್ದು, ಹಿಂದಿನ ವರ್ಷಕ್ಕಿಂತ ಹೆಚ್ಚು ಜನಸಂದಣಿ ಕಂಡುಬಂದಿದೆ. ಕೇದಾರನಾಥಕ್ಕೆ 20 ಲಕ್ಷ, ಬದರಿನಾಥಕ್ಕೆ 18 ಲಕ್ಷ, ಯಮುನೋತ್ರಿಗೆ 9 ಲಕ್ಷ ಹಾಗೂ ಗಂಗೋತ್ರಿಗೆ 1 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ.
ನಾಲ್ಕು ಧಾಮಗಳ ಬಾಗಿಲುಗಳು ಶೀಘ್ರದಲ್ಲೇ ಮುಚ್ಚುವುದರಿಂದ ಸರ್ಕಾರ ಚಳಿಗಾಲದ ಯಾತ್ರೆಯ ಪರಿಕಲ್ಪನೆಯನ್ನು ಯಶಸ್ವಿಯಾಗಿ ಜಾರಿಗೆ ತರುವ ಯೋಜನೆ ಮಾಡುತ್ತಿದೆ. ಕಳೆದ ವರ್ಷ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಈ ಯಾತ್ರೆಗೆ ಚಾಲನೆ ನೀಡಿದ್ದರು. ಈ ಬಾರಿ ದಕ್ಷಿಣ ಭಾರತದ ಯಾತ್ರಾರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.